ಕೊಡಗು: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮಡಿಕೇರಿಯಲ್ಲಿ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿತವಾಗಿದೆ. ಜಿಲ್ಲಾಡಳಿತ ಕಚೇರಿಯ ಕೆಳಭಾಗದಲ್ಲಿ ಮಣ್ಣು ಕುಸಿತವಾಗಿದ್ದು, ಮಂಗಳೂರು ರಸ್ತೆಯಲ್ಲಿ ಮಣ್ಣು ಹರಿಯುತ್ತಿದೆ. ಇದರಿಂದ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇನ್ನು ಇದೇ ರೀತಿ ಮಣ್ಣು ಕುಸಿತವಾಗುತ್ತಿದ್ದರೆ ಜಿಲ್ಲಾ ಕಚೇರಿಯ ಕಟ್ಟಡಕ್ಕೂ ಅಪಾಯವಿದೆ.
ಡಿಸಿ ಕಚೇರಿ ಕೆಳಭಾಗದಲ್ಲಿ ಹಲವಾರು ಮನೆಗಳಿವೆ. ಮಣ್ಣು ಸ್ವಲ್ಪ ಜಾರಿದರೂ ಸಹ ಅವುಗಳಿಂದ ಮನೆಗಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ. ಇಲ್ಲಿನ ಜನರು ಇದೀಗ ಭಯಭೀತರಾಗಿದ್ದಾರೆ. ಕುಸಿಯುತ್ತಿರುವ ಜಾಗಕ್ಕೆ ಮೇಲಿಂದ ಮಳೆ ನೀರು ಬೀಳದಂತೆ ಟಾರ್ಪಲ್ ಹೊದಿಸಲಾಗಿದೆ. ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಅಲ್ಲಲ್ಲಿ ಬೆಟ್ಟ ಕುಸಿಯುತ್ತಿದ್ದು ಜನರು ಆತಂಕದಲ್ಲಿದ್ದಾರೆ.
ಕಳೆದ ಮೂರು ವರ್ಷಗಳಿಂದ ಮಳೆಯಾದಾಗ ಜಿಲ್ಲಾ ಕಚೇರಿ ಮೇಲಿಂದ ನೀರು ಹರಿದು ಬರುತ್ತದೆ. ಕಚೇರಿ ಕೆಳಭಾಗದಲ್ಲಿ ನಮ್ಮ ಮನೆಗಳಿವೆ. ಮೇಲಿಂದ ಬರುವ ನೀರು ನಮ್ಮ ಮನೆಗಳಿಗೆ ಬರುತ್ತದೆ. ಈಗ ಬೆಟ್ಟ ಕುಸಿತವಾಗಿದೆ. ಮಣ್ಣು ರಸ್ತೆಗೆ ಬಂದು ಬಿದ್ದಿದೆ. ನಮ್ಮ ಮನೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಜೆಸಿಬಿಯಿಂದ ಮಣ್ಣು ತೆಗೆಸಿಹೋಗಬೇಕು. ವರ್ಷಗಳಿಂದ ತಡೆಗೋಡೆ ಕಟ್ಟುತ್ತಿದ್ದಾರೆ ಸರಿಯಾಗಿ ಕಟ್ಟಿಲ್ಲ. ತಡೆಗೋಡೆ ಪಕ್ಕದ ಬೆಟ್ಟ ಕುಸಿತವಾಗಿದೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.