ಸೋಮವಾರಪೇಟೆ (ಕೊಡಗು) :ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳುವಾಗ ಆಯತಪ್ಪಿ ಬಿದ್ದು ಇಬ್ಬರು ಅಸ್ಸೋಂ ಮೂಲದ ಕಾರ್ಮಿಕರು ಹಾಗೂ ಮಗುವೊಂದು ಗಾಯಗೊಂಡಿರುವ ಘಟನೆ ತಾಲೂಕಿನ ಗೌಡಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೂಗೂರು ಗ್ರಾಮದಲ್ಲಿ ನಡೆದಿದೆ.
ಸ್ಥಳೀಯ ಬೆಳೆಗಾರ ಮೋಹನ್ ಎಂಬುವರ ಕಾಫಿತೋಟದಲ್ಲಿ ಹಣ್ಣು ಕೊಯ್ಲು ಮಾಡುತ್ತಿದ್ದಾಗ ಹಠತ್ತಾಗಿ ಕಾಡಾನೆ ಕಾರ್ಮಿಕರನ್ನು ಅಟ್ಟಿಸಿಕೊಂಡು ಬಂದಿದೆ. ಓಡುವ ಸಂದರ್ಭ ಸುಕೂರ್ ಹಾಗೂ ಒಮೇಜ್ ಎಂಬುವರು ಬಿದ್ದು ಗಾಯಗೊಂಡಿದ್ದಾರೆ. ಮಗುವನ್ನು ಎತ್ತಿಕೊಂಡು ಓಡುತ್ತಿದ್ದ ತಾಯಿ ಬಿದ್ದ ಪರಿಣಾಮ ಮಗು ರುಕ್ಮಿಯಾಳ ಬಲಗೈ ಮೂಳೆ ಮುರಿದಿದೆ.
ಕಾರ್ಮಿಕರು ಜೋರಾಗಿ ಕಿರುಚಿಕೊಂಡಾಗ ಆನೆ ಅರಣ್ಯದೆಡೆಗೆ ತೆರಳಿದೆ. ಗಾಯಾಳುಗಳನ್ನು ಅರಣ್ಯ ಇಲಾಖೆ ಮೂಲಕವೇ ಹಾಸನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಶನಿವಾರಸಂತೆ ಆರ್‌ಎಫ್ಒ ಪ್ರಫುಲ್ ಕುಮಾರ್ ಶೆಟ್ಟಿ ಹಾಗೂ ಠಾಣಾಧಿಕಾರಿ ದೇವರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಗ್ರಾಮಸ್ಥರ ಅಸಮಾಧಾನ: ಇತ್ತೀಚಿನ ದಿನಗಳಲ್ಲಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಆನೆ ಕಂದಕ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸದೆ ಇರುವುದಕ್ಕೆ ಆಕ್ರೋಶಗೊಂಡ ಗ್ರಾಮಸ್ಥರು, ಅರಣ್ಯ ಇಲಾಖೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಅರಣ್ಯ ಕಚೇರಿ ಎದುರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.
ಕಷ್ಟಪಟ್ಟು ಬೆಳೆದ ಭತ್ತ ಸೇರಿದಂತೆ ಎಲ್ಲಾ ಬೆಳೆಗಳನ್ನು ಕಾಡಾನೆಗಳ ಹಿಂಡು ತುಳಿದು ನಾಶ ಮಾಡುತ್ತಿವೆ. ಕಾಡಾನೆ ದಾಳಿ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಂಡು ಹಿಡಿಯುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ ಎಂದು ಕೂಗೂರು ಗ್ರಾಮದ ಕೃಷಿಕ ಸುಮಂತ್ ಆರೋಪಿಸಿದರು.