ಕೊಡಗು : ಜಿಲ್ಲೆಯ ಕುಶಾಲನಗರ ಸಮೀಪದ ಬೈಲುಕುಪ್ಪೆಯಲ್ಲಿರುವ ಟಿಬೆಟಿಯನ್ ಕ್ಯಾಂಪಿನ ಧರ್ಮಶಾಲಾ ಕೋವಿಡ್ ಕಾರಣದಿಂದಾಗಿ ಬಂದ್ ಆಗಿತ್ತು. ಅಂದು ಬಂದ್ ಆಗಿದ್ದ ಧರ್ಮಶಾಲಾ ಮೊನಾಸರಿ ಎರಡು ವರ್ಷಗಳ ಬಳಿಕ ಇದೀಗ ಮತ್ತೆ ಪ್ರವಾಸಿಗರಿಗೆ ಮುಕ್ತವಾಗಿದೆ. ಈ ಹಿಂದೆ ಕೋವಿಡ್ ಕಾರಣದಿಂದ ಆತಂಕಗೊಂಡ ಟಿಬೆಟಿಯನ್ ಧರ್ಮ ಗುರುಗಳು ಧರ್ಮಶಾಲಾ ಮೊನಾಸರಿಯನ್ನು ಸಂಪೂರ್ಣ ಬಂದ್ ಮಾಡಿದ್ದರು.
ಮೊನಾಸರಿಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು ಕಲಿಯುತ್ತಿದ್ದರಿಂದ, ಪ್ರವಾಸಿಗರಿಗೆ ಮೊನಾಸರಿ ಬರಲು ಅವಕಾಶ ನೀಡಿದರೆ ಕೋವಿಡ್ ಹರಡುವ ಸಾಧ್ಯತೆಗಳು ಹೆಚ್ಚಿರುತ್ತದೆ ಎಂದು ಭಾವಿಸಲಾಗಿತ್ತು. ಒಂದು ವೇಳೆ ಕೋವಿಡ್ ಸೋಂಕು ಧರ್ಮಶಾಲೆಯ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹರಡಿದಲ್ಲಿ ಅಪಾಯ ಉಂಟಾಗಬಹುದೆಂಬ ಆತಂಕದಿಂದ ಮೊನಾಸರಿಗೆ ಸಾರ್ವಜನಿಕರ ಭೇಟಿಯನ್ನು ಎರಡು ವರ್ಷಗಳಿಂದ ನಿಷೇಧಿಸಲಾಗಿತ್ತು.
ಬಂದ್ ಆಗಿದ್ದ ಧರ್ಮಶಾಲಾ ಮೊನಾಸರಿ ಎರಡು ವರ್ಷಗಳ ಬಳಿಕ ಇದೀಗ ಮತ್ತೆ ಪ್ರವಾಸಿಗರಿಗೆ ತೆರೆಯಲಾಗಿದೆ. ಈ ಹಿಂದೆ ಧರ್ಮಶಾಲಾ ಮೊನಾಸರಿಯನ್ನು ನೋಡಲು ದೇಶದ ವಿವಿಧ ಭಾಗಗಳಿಂದ ಮತ್ತು ವಿದೇಶಗಳಿಂದ ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದರು. ಈ ಪ್ರವಾಸಿಗರನ್ನು ನಂಬಿದ್ದ ನೂರಾರು ವ್ಯಾಪಾರಿಗಳು ಲಾಕ್ ಡೌನ್ ನಿಂದಾಗಿ ಕಂಗಾಲಾಗಿದ್ದರು. ಸದ್ಯ ನಿನ್ನೆಯಿಂದ ಮೊನಾಸರಿಯನ್ನು ತೆರೆದು ಎಲ್ಲಾ ಪ್ರವಾಸಿಗರಿಗೆ ಪ್ರವೇಶ ಮುಕ್ತಗೊಳಿಸಿರುವುದರಿಂದ ಪ್ರವಾಸಿಗರು ಮತ್ತೆ ಬರಲಾರಂಭಿಸಿದ್ದಾರೆ. ಜೊತೆಗೆ ವ್ಯಾಪಾರಿಗಳೂ ತುಂಬ ಹರ್ಷ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆ.
ಎರಡು ವರ್ಷಗಳಿಂದ ಬಂದ್ ಆಗಿದ್ದ ಮೊನಾಸರಿ ಈಗ ತೆರೆದಿರುವುದು ತುಂಬಾ ಖುಷಿಯಾಗಿದೆ ಎಂದು ಪ್ರವಾಸಿಗರು ಹರ್ಷ ವ್ಯಕ್ತಪಡಿಸಿದ್ದು, ಒಂದಷ್ಟು ಪ್ರಮಾಣದಲ್ಲಿ ಜನರು ಬರುತ್ತಿರುವುದರಿಂದ ಮತ್ತೆ ವ್ಯಾಪಾರ ವಹಿವಾಟುಗಳು ಚೇತರಿಕೆ ಕಾಣಬಹುದು ಎಂಬ ನಿರೀಕ್ಷೆಯಲ್ಲಿ ವ್ಯಾಪಾರಿಗಳಿದ್ದಾರೆ.
ಓದಿ :ಆ್ಯಂಡ್ರೆ ರಸೆಲ್ ಅಬ್ಬರ.. ಪಂಜಾಬ್ಸ್ ಕಿಂಗ್ಸ್ ವಿರುದ್ಧ ಕೆಕೆಆರ್ಗೆ ಭರ್ಜರಿ ಜಯ