ಕುಶಾಲನಗರ :ದುಬಾರೆ ಅರಣ್ಯ ವ್ಯಾಪ್ತಿಯ ಆನೆ ಕ್ಯಾಂಪ್ನಲ್ಲಿ ದಾಂಧಲೆ ಮಾಡುತ್ತಿದ್ದ ಖಾಸಗಿ ಆನೆ ಶಿಬಿರದ 8 ಆನೆಗಳನ್ನು ಬಂಡೀಪುರಕ್ಕೆ ಸ್ಥಳಾಂತರ ಮಾಡಲಾಗಿದೆ.
2000ನೇ ಇಸವಿಯಲ್ಲಿ ಪ್ರಜ್ಞಾ ಚೌಟ ಎಂಬುವರು ಕೊಡಗಿನ ಕುಶಾಲನಗರದ ಸಮೀಪ ದುಬಾರೆ ಅರಣ್ಯ ವ್ಯಾಪ್ತಿಯ ಸ್ವಂತ ಜಾಗದಲ್ಲಿ ಆನೆ ಕ್ಯಾಂಪ್ ಸ್ಥಾಪಿಸಿದರು. ಅಲ್ಲಿ ಆನೆಗಳ ನಡವಳಿಕೆಗಳಿಗೆ ಸಂಬಂಧಿಸಿದ ಅಧ್ಯಯನ ಮತ್ತು ಇತರೆ ಆನೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಅರಿತುಕೊಳ್ಳಲು ಆನೆಗಳನ್ನು ಸಾಕಲಾಗಿತ್ತು.
ಪ್ರಾರಂಭದಲ್ಲಿ ಆನೆ ಕ್ಯಾಂಪ್ನಲ್ಲಿ ಇರುತ್ತಿದ್ದ ಆನೆಗಳು ನಂತರ ದಿನಗಳಲ್ಲಿ ಕ್ಯಾಂಪ್ನಿಂದ ಹೊರ ಹೋಗಲು ತೊಡಗಿದವು. ಅಲ್ಲದೇ, ಸ್ಥಳೀಯ ಕಾಫಿ ತೋಟ ಮತ್ತು ರೈತರು ಬೆಳೆದ ಫಸಲುಗಳನ್ನು ತಿಂದು ನಾಶ ಮಾಡಿದ್ದವು.
ಬಂಡೀಪುರಕ್ಕೆ ಆನೆಗಳ ಸ್ಥಳಾಂತರ ರೈತರು ಬೆಳೆದ ಬೆಳೆ ಮತ್ತು ಕಾಫಿ ತೋಟ ಸಾಕಾನೆಗಳ ಕಾಟದಿಂದ ನಾಶವಾಗಿದ್ದರಿಂದ ರೈತರ ಸಂಕಟ ಮುಗಿಲು ಮುಟ್ಟಿತ್ತು. ರೈತರು, ಸ್ಥಳೀಯ ನಿವಾಸಿಗಳು ಅರಣ್ಯ ಇಲಾಖೆಗೆ ತೆರಳಿ ಪ್ರಜ್ಞಾ ಅವರಿಗೆ ಸೇರಿದ ಆನೆಗಳು ತಾವುಗಳು ಬೆಳೆದ ಬೆಳೆಗಳನ್ನು ನಾಶ ಮಾಡುತ್ತಿವೆ. ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ದೂರು ನೀಡಿ ಸರ್ಕಾರದ ಗಮನಕ್ಕೆ ತಂದಿದ್ದರು.
ಈ ವಿಷಯವನ್ನು ಅನೇಕ ಬಾರಿ ಆನೆ ಮಾಲೀಕರ ಗಮನಕ್ಕೆ ಸರ್ಕಾರ ತಂದಿದೆ. ಆನೆಯನ್ನು ಕ್ಯಾಂಪ್ನಿಂದ ಹೊರ ಬಿಡುವುದು ಬೇಡ ಎಂದು ತಿಳಿಸಿದ್ರೂ ಕೂಡ ಮತ್ತೆ ಮತ್ತೆ ಸಾಕಾನೆಗಳು ಹೊರ ಬಂದು ಬೆಳೆಗಳನ್ನು ನಾಶ ಮಾಡಿದ್ದವು. ಈ ಹಿನ್ನೆಲೆ ಆಗಸ್ಟ್ನಲ್ಲಿ ವನ್ಯಜೀವಿ ವಿಭಾಗದ ಮುಖ್ಯ ಸಂರಕ್ಷಣಾಧಿಕಾರಿ ಆನೆಗಳನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳುವಂತೆ ಆದೇಶ ಹೊರಡಿಸಿತು.
ಈ ಆದೇಶದ ಹಿನ್ನೆಲೆ ಗುರುವಾರ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ಸಮ್ಮುಖದಲ್ಲಿ ಒಂದು ಮರಿಯಾನೆ ಸೇರಿದಂತೆ ಒಟ್ಟು 8 ಆನೆಗಳನ್ನು ಲಾರಿಗಳ ಮೂಲಕ ಬಂಡೀಪುರದ ರಾಮಪುರ ಶಿಬಿರಕ್ಕೆ (43ರ ಪ್ರಾಯದ ಹೀರಣ್ಯ ಸೇರಿದಂತೆ ಅದರ ಮೂರು ತಿಂಗಳ ಮಗು ಜೊತೆಯಲ್ಲಿ 34ರ ಮಾಲಾದೇವಿ, 8 ವರ್ಷದ ಪೂಜಾ, 4 ವರ್ಷದ ಕಮಲಿ, 2 ವರ್ಷದ ಕನ್ನಿಕಾ, 7ವರ್ಷದ ಗಜ, 12 ವರ್ಷದ ಧರ್ಮಜ ಎನ್ನುವ ಒಟ್ಟು 8 ಆನೆಗಳನ್ನು ಸಾಗಿಸಲಾಗಿದೆ).
ಓದಿ:ನಾಳೆ ಸಂಜೆಯೊಳಗೆ ಎಂಇಎಸ್ ಸಂಘಟನೆ ನಿಷೇಧಕ್ಕೆ ಸರ್ಕಾರಕ್ಕೆ ಗಡುವು ನೀಡಿದ ಕನ್ನಡಪರ ಸಂಘಟನೆಗಳು