ಮಡಿಕೇರಿ (ಕೊಡಗು ):ರಾಜ್ಯದಲ್ಲಿ ಯಾವುದೇ ಸರ್ಕಾರದ ಆಡಳಿತದಲ್ಲಿದ್ದರೂ ಪ್ರಾಕೃತಿಕ ವಿಕೋಪದಿಂದ ನಲುಗುತ್ತಿರುವ ಜನರಿಗೆ ಯಾಕೆ ಶಾಶ್ವತ ನೆಲೆ ಕಲ್ಪಿಸಲು ಸಾಧ್ಯವಾಗ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ಶಾಶ್ವತ ನೆಲೆ ಒದಗಿಸಲು ಯಾಕಾಗುತ್ತಿಲ್ಲ: ಡಿಕೆಶಿ ಬೇಸರ - ಪ್ರಾಕೃತಿಕ ವಿಕೋಪ ಕುರಿತು ಡಿಕೆ ಶಿವಕುಮಾರ್ ಹೇಳಿಕೆ
ಪ್ರಾಕೃತಿಕ ವಿಕೋಪಕ್ಕೆ ತುತ್ತಾದವರಿಗೆ ಶಾಶ್ವತ ನೆಲೆ ಕಲ್ಪಿಸುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆಯೋ ಅಥವಾ ರಾಜಕಾರಣಿಗಳು ವಿಫಲರಾಗಿದ್ದಾರೆಯೇ ಗೊತ್ತಾಗುತ್ತಿಲ್ಲ. ಯಾವುದೇ ಸರ್ಕಾರ ಆಡಳಿತಕ್ಕೆ ಬಂದರೂ ಶಾಶ್ವತ ಪರಿಹಾರ ಕಲ್ಪಿಸಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿವೆ. ಜನ ಪ್ರತೀ ವರ್ಷ ಸಮಸ್ಯೆಗೆ ಸಿಲುಕುತ್ತಲೇ ಇದ್ದಾರೆ. ಆದರೂ, ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸಲು ಯಾಕೆ ಸಾಧ್ಯವಾಗುತ್ತಿಲ್ಲ. ಈಗಾಗಲೇ ಕೆಲ ಖಾಸಗಿಯವರು ಜಾಗ ಕೊಟ್ಟಿದ್ದರೂ ಅಲ್ಲಿ ಸೌಲಭ್ಯ ಕಲ್ಪಿಸಿಕೊಡಲು ಯಾಕೆ ಆಗ್ತಿಲ್ಲ. ಈ ವಿಷಯದಲ್ಲಿ ಜಿಲ್ಲಾಡಳಿತ ವಿಫಲವಾಗಿದೆಯೋ ಅಥವಾ ರಾಜಕಾರಣಿಗಳು ವಿಫಲರಾಗಿದ್ದಾರೆಯೇ ಗೊತ್ತಾಗುತ್ತಿಲ್ಲ ಎಂದರು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ಪ್ರವಾಹ ಪೀಡಿತರ ರಕ್ಷಣೆಗೆ ಒಂದು ಕಾರ್ಯ ಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸುವುದಾಗಿ ಭರವಸೆ ನೀಡಿದರು.
ಮಳೆ ಬರಬೇಕು, ಮಳೆ ಬಂದರೆ ಬೆಳೆ. ರಾಜ್ಯಕ್ಕೆ ಕೊಡಗಿನ ಕೊಡುಗೆ ಅಪಾರವಿದೆ. ಕೊಡಗು ಕರ್ನಾಟಕ ರಾಜ್ಯಕ್ಕೆ ಸೇರಿದ ಸಂದರ್ಭದಲ್ಲೇ ರಾಜ್ಯದ ಖಜಾನೆಗೆ ಆರ್ಥಿಕ ಸಂಪನ್ಮೂಲವನ್ನು ಹೊತ್ತು ತಂದಿತ್ತು. ದೇಶದ ಭದ್ರತೆಗೆ ಕೊಡಗು ಅವಿಸ್ಮರಣೀಯ ಕೊಡುಗೆ ನೀಡಿದೆ. ಭೌಗೋಳಿಕವಾಗಿ ಅಪಾರ ಸಂಪನ್ಮೂಲವನ್ನು ಹೊಂದಿದೆ. ಇಲ್ಲಿ ಹುಟ್ಟಿ ಹರಿಯುವ ಕಾವೇರಿಯ ಕಾಣಿಕೆಯನ್ನು ಬೆಂಗಳೂರಿನ ಜನತೆ ಮರೆಯುವಂತಿಲ್ಲ ಎಂದರು.