ವಿರಾಜಪೇಟೆ (ಕೊಡಗು): ಮೂಲ ಸೌಕರ್ಯಗಳ ಕೊರತೆ ಹಿನ್ನೆಲೆ ತಾಲೂಕಿನ ತೋಳುರುಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂತಿ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.
ಗ್ರಾಮದಲ್ಲಿ ನೆಟ್‌ವರ್ಕ್, ರಸ್ತೆ, ವಿದ್ಯುತ್ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸದಿರುವುದು ಚುನಾವಣೆ ಬಹಿಷ್ಕರಿಸಲು ಮುಖ್ಯ ಕಾರಣವಾಗಿದೆಯಂತೆ. ಡಿಸೆಂಬರ್ 22ರಂದು ನಡೆಯುವ ಚುನಾವಣೆಯಲ್ಲಿ ಗ್ರಾಮದಿಂದ ಯಾರೂ ಮತ ಹಾಕುವುದಿಲ್ಲ ಎಂದಿದ್ದಾರೆ.
ಗ್ರಾಮದಲ್ಲಿ ನೆಟ್‌ವರ್ಕ್ ಮರೀಚಿಕೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಅಲ್ಲದೆ ಪೋಸ್ಟ್ ಕಾರ್ಡ್ ಅಭಿಯಾನ ಕೂಡ ಮಾಡಲಾಗಿತ್ತು. ಸಂಸದ ಪ್ರತಾಪ್ ಸಿಂಹ ಅವರಿಗೂ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತದಾನ ಬಹಿಷ್ಕರಿಸಲು ಮುಂದಾದ ಕೂತಿ ಗ್ರಾಮಸ್ಥರು! ಈ ಭಾಗದ ಸುಮಾರು 40ಕ್ಕೂ ಅಧಿಕ ವಿದ್ಯಾರ್ಥಿಗಳು 2 ಕಿ.ಮೀ. ತೆರಳಿ ರಸ್ತೆ ಬದಿಯ ಬಸ್ ನಿಲ್ದಾಣವನ್ನೇ ಕಲಿಕಾ ಕೇಂದ್ರವನ್ನಾಗಿ ಮಾಡಿಕೊಂಡರೆ, ಕೆಲವು ವಿದ್ಯಾರ್ಥಿಗಳು ಬೆಟ್ಟದ ಮೇಲೆ ಕುಳಿತು ಆನ್ಲೈನ್ ತರಗತಿಯಲ್ಲಿ ತೊಡಗಿರುವುದು ವಿಪರ್ಯಾಸ. ಆರೋಗ್ಯ ಸಮಸ್ಯೆ ಕಾಡಿದರೆ ತುರ್ತು ವಾಹನಕ್ಕೆ ಕರೆ ಮಾಡಬೇಕಾದರೂ 2 ಕಿ.ಮೀ. ನಡೆದು ಬರಬೇಕು. ದೇಶ ಸೇವೆಗೆ ಗ್ರಾಮದಿಂದ ಹಲವು ಸೈನಿಕರು ಹೋಗಿದ್ದಾರೆ.
ಜೊತೆಗೆ ಕುಟುಂಬಸ್ಥರು ಕರೆ ಮಾಡಿ ಮಾತನಾಡಬೇಕಾದರೂ ನೆಟ್ವರ್ಕ್ಗಾಗಿ ಹುಡುಕಾಡಬೇಕಾದ ದುಸ್ಥಿತಿ ಇದೆ. ಗ್ರಾಮದ ಮೂಲಕ ಖಾಸಗಿ ಸಂಸ್ಥೆಯೊಂದರ ನೆಟ್ವರ್ಕ್ನ ಒಎಫ್‌ಸಿ ಕೇಬಲ್ ಹಾದು ಹೋಗಿದ್ದರೂ ಕೂಡ ಅನುಕೂಲವಾಗಿಲ್ಲ. ಹೀಗಾಗಿ ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಗೆ ಮತದಾನ ಮಾಡುವುದಿಲ್ಲ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.