ಕೊಡಗು: ಕೊಡಗಿನಲ್ಲಿ ಇದೀಗ ಊರು ದೇವರ ಹಬ್ಬದ ಸಂಭ್ರಮ. ಜಿಲ್ಲೆಯ ಒಂದೊಂದು ಊರಿನಲ್ಲಿ ಒಂದೊಂದು ರೀತಿಯ ಆಚರಣೆ ನಡೆಯುವುದು ಈ ಹಬ್ಬದ ವಿಶೇಷ. ಹುಡುಗರು ಹುಡುಗಿಯ ವೇಷ, ಹುಡುಗಿಯರು ಹುಡುಗರ ವೇಷ ತೊಟ್ಟು ಈ ಹಬ್ಬಕ್ಕೆ ಆಗಮಿಸುತ್ತಾರೆ. ಈ ಆಚರಣೆಯ ವಿಶೇಷತೆ ಇಷ್ಟಕ್ಕೆ ಮುಗಿದಿಲ್ಲ.
ನವಿಲು ಗರಿ ಹಿಡಿದ ಭಕ್ತಾದಿಗಳು ನೃತ್ಯ ಮಾಡುತ್ತಾರೆ. ತಲೆಯ ಮೇಲೆ ಜಿಂಕೆ ಕೊಂಬು-ನವಿಲು ಗರಿ ಇಟ್ಟು ಕುಣಿದಾಡುತ್ತಾರೆ. ಮತ್ತೊಂದೆಡೆ, ಮದುವೆ ಶಾಸ್ತ್ರಕ್ಕೆ ಹೊರಟಂತೆ ಯುವಕರು ರೆಡಿಯಾಗುತ್ತಾರೆ. ಮಡಿಕೇರಿ ಸಮೀಪದ ಮಕ್ಕಂದೂರು ಗ್ರಾಮದ ಭದ್ರಕಾಳೇಶ್ವರ ದೇವಾಲಯ ಇಂತಹ ವಿಶಿಷ್ಟವಾದ ಹಬ್ಬಕ್ಕೆ ಸಾಕ್ಷಿಯಾಯಿತು.
ಅಂಗೋಲ-ಪೊಂಗೋಲ ವಿಶೇಷತೆ
ಇಲ್ಲಿ ಪ್ರಮುಖವಾಗಿ ಗಮನ ಸೆಳೆದಿದ್ದು ಅಂಗೋಲ-ಪೊಂಗೋಲ. ಅಂದರೆ ವರನಿಗೆ ವಧುವಿನ ಡ್ರೆಸ್, ವಧುವಿಗೆ ವರನ ಡ್ರೆಸ್ ಹಾಕಿ ಮದುವೆಗೆ ಹೊರಟಂತೆ ಬಂದು ದೇವರಿಗೆ ಹರಕೆ ಒಪ್ಪಿಸುವುದು ಇಲ್ಲಿನ ಆಕರ್ಷಣೆ. ತಮ್ಮ ಮಕ್ಕಳಿಗೆ ಏನಾದರೊಂದು ಕಷ್ಟ ಬಂದಾಗ ಪೋಷಕರು ಊರಿನ ಭದ್ರಕಾಳೇಶ್ವರ ದೇವರಿಗೆ ಈ ರೀತಿಯ ಹರಕೆಯನ್ನು ಹೊತ್ತುಕೊಳ್ಳುತ್ತಾರಂತೆ. ನಂತರ ಹಬ್ಬದ ಸಂದರ್ಭ ದೇವರಿಗೆ ಈ ರೀತಿಯಲ್ಲಿ ಹರಕೆಯನ್ನು ಒಪ್ಪಿಸುತ್ತಾರೆ. ಈ ದೃಶ್ಯ ನೋಡಲು ನೂರಾರು ಸಂಖ್ಯೆಯಲ್ಲಿ ಜನರು ಉತ್ಸವಕ್ಕೆ ಆಗಮಿಸುತ್ತಾರೆ.
ಈ ಉತ್ಸವದಲ್ಲಿ ಜಿಂಕೆ ಕೊಂಬುಗಳನ್ನು ಹಿಡಿದು ನೃತ್ಯ ಮಾಡುವುದು ಮತ್ತಷ್ಟು ರೋಚಕವಾಗಿರುತ್ತದೆ. ಪುರಾತನ ಕಾಲದಿಂದಲೂ ಈ ಕೊಂಬಾಟ ಎಂಬ ಆಚರಣೆ ನಡೆದುಕೊಂಡು ಬರುತ್ತಿದೆ. ತಮ್ಮ ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸಿ ದೇವಾಲಯದ ಸುತ್ತಲೂ ಭಕ್ತಾದಿಗಳು ನೃತ್ಯ ಮಾಡುತ್ತಾರೆ. ಅದರಂತೆ ನವಿಲುಗರಿ ಹಿಡಿದು ದೇವಾಲಯದ ಸುತ್ತಲೂ ಕುಣಿಯುತ್ತಾರೆ. ಇದಕ್ಕೆ ಪೀಲಿಯಾಟ ಎಂದು ಹೇಳಲಾಗುತ್ತದೆ. ಹೀಗೆ ಹಲವು ಬಗೆಯ ನೃತ್ಯದ ಮೂಲಕ ತಮ್ಮ ಇಷ್ಟ ದೇವರನ್ನು ಸಂತೃಪ್ತಗೊಳಿಸಲಾಗುತ್ತದೆ. ಇಲ್ಲಿ ತಾಳಕ್ಕೆ ತಕ್ಕಂತ ಹೆಜ್ಜೆ ಹಾಕುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಎರಡು ವರ್ಷಕ್ಕೊಮ್ಮೆ ಈ ದೇವಾಲಯದಲ್ಲಿ ಈ ರೀತಿಯ ವಿಶೇಷ ಉತ್ಸವ ನಡೆಯುತ್ತದೆ.
ಕೊಡಗು ವಿಶೇಷ ಸಂಸ್ಕೃತಿ, ಆಚಾರ ವಿಚಾರಗಳನ್ನು ಒಳಗೊಂಡ ಜಿಲ್ಲೆ. ಏಪ್ರಿಲ್ ಮೇ ತಿಂಗಳಿನಲ್ಲಿ ಊರ ಹಬ್ಬಗಳು ನಡೆಯುವುದು ಸಾಮಾನ್ಯ. ಒಂದು ಊರಿನಿಂದ ಮತ್ತೊಂದು ಊರಿನ ಹಬ್ಬ ವಿಶೇಷತೆಯಿಂದ ಕೂಡಿದ್ದು ದೂರದ ಊರಿನ ಜನರು ಇಲ್ಲಿಗೆ ಆಗಮಿಸುತ್ತಾರೆ.