ಕೊಡಗು: ಮಳೆಗಾಲ ಬಂತಂದ್ರೆ ಆ ಗ್ರಾಮದ ಜನರು ಬೆಚ್ಚಿ ಬೀಳುತ್ತಾರೆ. ವರುಣನ ಆಗಮನದ ಮುನ್ಸೂಚನೆ ಸಿಕ್ಕರೆ ಸಾಕು ಆ ಊರಿನವರು ತಮ್ಮ ಮನೆ ಬಿಟ್ಟು ಹೊರಬರುವುದಿಲ್ಲ. ಅದ್ರಲ್ಲೂ ಆ ಸೇತುವೆಯ ಮೇಲೆ ಕಾಲಿಟ್ಟರೆ ಮತ್ತೊಮ್ಮೆ ಅದೇ ಸೇತುವೆಯಲ್ಲಿ ಮನೆ ಸೇರುತ್ತೇವೆ ಅನ್ನೋ ಅನುಮಾನ. ಹಾಗಾದ್ರೆ ಯಾವುದು ಆ ಗ್ರಾಮ. ಆ ಗ್ರಾಮದ ಜನತೆ ಮಳೆ ಬಂದ್ರೆ ಮನೆಯಿಂದ ಹೊರಬರಲು ಹೆದರುವುದೇಕೆ ನೋಡೋಣ.
ಮೈದುಂಬಿ ಹರೀತಾ ಇರೋ ನದಿ... ನದಿಗೆ ಅಡ್ಡಲಾಗಿ ಕಟ್ಟಿರುವ ಸಿಮೆಂಟಿನ ಸೇತುವೆ... ಇದನ್ನು ನೋಡಿದ್ರೇನೆ ಒಂದ್ ರೀತಿ ಭಯ ಆಗುತ್ತೆ. ಯಾಕಂದ್ರೆ, ಈ ಸೇತುವೆಯ ಮಧ್ಯೆ ಬಿರುಕು ಮೂಡಿದೆ. ಯಾವ ಕ್ಷಣದಲ್ಲಿ ಏನಾಗುತ್ತೋ ಅನ್ನೋ ಆತಂಕ ಇಲ್ಲಿನ ಜನರಲ್ಲಿದೆ.
ಊರಿಗೆ ಇರೋದು ಒಂದೇ ಸೇತುವೆ... ಅದು ಯಾವಾಗ ಕುಸಿಯುತ್ತೋ ಅನ್ನೋ ಭಯ! ಇದು ಮಡಿಕೇರಿ ತಾಲೂಕಿನ ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೇತುವೆ. ಹೆಮ್ಮತ್ತಾಳು ಮತ್ತು ಮುಕ್ಕೋಡ್ಲು ಗ್ರಾಮಗಳಿಗೆ ಈ ಸೇತುವೆ ಸಂಪರ್ಕ ಕಲ್ಪಿಸುತ್ತದೆ. 2018ರಲ್ಲಿ ಭೂಕುಸಿತದ ವೇಳೆ ಬೃಹತ್ ಮರಗಳು ಅಪ್ಪಳಿಸಿದ್ದರಿಂದ ಸೇತುವೆಗೆ ಹಾನಿಯಾಗಿದೆ. ಸೇತುವೆ ಮೂರು ಕಡೆಗಳಲ್ಲಿ ತುಂಡರಿಸಿದ್ದು ಯಾವುದೇ ಕ್ಷಣದಲ್ಲೂ ಕುಸಿಯಬಹುದು. ಜೊತೆಗೆ ಸೇತುವೆ ತೀರಾ ಕೆಳಮಟ್ಟದಲ್ಲಿ ಇರೋದ್ರಿಂದ ಕಡಿಮೆ ಮಳೆಯಾದ್ರೂ ಸಾಕು ಮುಳುಗಡೆಯಾಗ್ತದೆ. ಹಾಗಾಗಿ ಮಳೆಗಾಲದಲ್ಲಿ ಜನ ಜೀವಭಯದಲ್ಲೇ ಓಡಾಡುತ್ತಿದ್ದಾರೆ.
ಹೆಮ್ಮತ್ತಾಳು ಗ್ರಾಮದಿಂದ ಪೇಟೆಗೆ ಹೋಗಲು ಇದು ಪ್ರಮುಖ ಸೇತುವೆ. ಒಮ್ಮೊಮ್ಮೆ ಸೇತುವೆ ಮುಳುಗಿದ್ರೆ ದಿನಗಟ್ಟಲೆ ಊರಿಂದ ಹೊರಹೋಗಲು ಸಾಧ್ಯವಿಲ್ಲ. ಅಷ್ಟೇ ಏಕೆ? ಊರಿಂದ ಹೊರಗೆ ಹೋದವರು ಬರುವಷ್ಟರಲ್ಲಿ ಸೇತುವೆ ಮುಳುಗಿದ ಉದಾಹರಣೆಯೂ ಇದೆ. ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮನೆ, ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರ ಮನೆ ಸೇತುವೆಯಿಂದ 10 ಕಿಲೋ ಮೀಟರ್ ದೂರದಲ್ಲೇ ಇದೆ. ಸಮಸ್ಯೆ ಪರಿಹರಿಸುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ. ಈಗಲಾದ್ರೂ ಸಂಬಂಧಿಸಿದವರು ಇವರತ್ತ ಗಮನಹರಿಸಬೇಕಿದೆ.