ಮಡಿಕೇರಿ(ಕೊಡಗು):ವಾಸಕ್ಕೆ ಸ್ವಂತ ಮನೆ ಇಲ್ಲ, ಮಕ್ಕಳಿಗೆ ಶಾಲೆ ಇಲ್ಲ. ಮಳೆ ಬಿಸಿಲು ತಡೆಯಲು ಪ್ಲಾಸ್ಟಿಕ್ ಹೊದಿಕೆ ಹಾಕಿ, ಕಷ್ಟದಲ್ಲಿ ಜೀವನ ಸಾಗಿಸುತ್ತಿರುವ ಜನರು. ಇದು ಕೊಡಗು ಜಿಲ್ಲೆಯ ಆದಿವಾಸಿ ಜನರ ಬದುಕು. ಇಲ್ಲಿನ ವಿರಾಜಪೇಟೆ ತಾಲೂಕಿನ ಬಾಳಗೋಡು ಆದಿವಾಸಿ ಜನರು ಸ್ವಂತ ಮನೆ ಇಲ್ಲದೆ ಪರದಾಡುತ್ತಿದ್ದಾರೆ.
ಜಿಲ್ಲಾಡಳಿತ ಈ ಆದಿವಾಸಿಗಳಿಗೆ ಮನೆ ನಿರ್ಮಿಸಿಕೊಡಲು ಜಾಗ ಗುರುತು ಮಾಡಿತ್ತು. ಆದರೆ ಈಗ ಮನೆ ಕೊಡದೆ, ಇದ್ದ ಜಾಗವನ್ನು ಅರಣ್ಯ ಜಾಗ ಎಂದು ಹೇಳಿ ಖಾಲಿ ಮಾಡುವಂತೆ ಹೇಳಿದ್ದಾರೆ ಎನ್ನಲಾಗ್ತಿದೆ. ಇಲ್ಲಿನ ಜನರು ಮಾತ್ರ ನಾವು ಇಲ್ಲೇ ಸಾಯುತ್ತೇವೆಯೇ ಹೊರತು, ಜಾಗ ಖಾಲಿ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಸೌಕರ್ಯ ಕಲ್ಪಿಸಲು ಕೊಡಗಿನ ಮೂಲ ಜನಾಂಗದ ಒತ್ತಾಯ ಕೊಡಗಿನ ಮೂಲ ಜನಾಂಗದವರು ಹಲವಾರು ವರ್ಷಗಳಿಂದ ಜೀತ ಮಾಡುತ್ತ ಕಾಫಿ ತೋಟದ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ. ಕಾಫಿ ತೋಟ ಬಿಟ್ಟು ಸ್ವಂತ ಜೀವನ ನಡೆಸಲು ಹೊರ ಬಂದಿರುವ 21 ಕುಟುಂಬಗಳು ಅರಣ್ಯಕ್ಕೆ ಸೇರಿದ ಜಾಗದಲ್ಲಿ ಕಳೆದ ಮೂರು ವರ್ಷಗಳಿಂದ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ ಜೀವನ ನಡೆಸುತ್ತಿವೆ. ಎರಡು ವರ್ಷಗಳಿಂದ ನಿವೇಶನಕ್ಕೆ ಹೋರಾಟ ಮಾಡುತ್ತಿದ್ದಾರೆ.
ಕಳೆದ ವರ್ಷ ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ನಿವೇಶನಗಳನ್ನು ಕೊಡುವ ಭರವಸೆ ನೀಡಿದ್ದರು. ಆದರೆ ಈಗ ಆರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆyವರು ಇದು ಸರ್ಕಾರಿ ಜಾಗ. ಇರುವ ಗುಡಿಸಲುಗಳನ್ನು ಖಾಲಿ ಮಾಡಿ. ಈ ಜಾಗದಲ್ಲಿ ನಿವೇಶನ ಕೊಡಲ್ಲ ಎಂದು ಹೇಳುತ್ತಿದ್ದಾರೆ ಎನ್ನಲಾಗ್ತಿದೆ.
ಇದರಿಂದ ಬೇಸತ್ತ ಇಲ್ಲಿನ ಜನರು ಹೋರಾಟದ ಹಾದಿ ಹಿಡಿದಿದ್ದಾರೆ. ಸೂರಿಲ್ಲದೆ ಕೊರಗುತ್ತಿರುವ ಇವರಿಗೆ ಜಿಲ್ಲಾಡಳಿತ ಮತ್ತು ವಸತಿ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ವಿ. ಸೋಮಣ್ಣ ಅವರು ಈ ಬಡಪಾಯಿಗಳ ಗೋಳನ್ನು ಆಲಿಸಿ, ಸೂರು ಕಲ್ಪಿಸಿಕೊಡಬೇಕಿದೆ.