ಕೊಡಗು : ಕಳ್ಳತನವಾದ್ರೆ ಪೊಲೀಸರಿಗೆ ದೂರು ಕೊಡೊದು ಸಾಮಾನ್. ಆದ್ರೆ, ಎಸ್ಪಿ ಆಫೀಸಿನಲ್ಲಿ ಹಣ ಕಳ್ಳತನವಾದ್ರೆ ಯಾರಿಗೆ ಹೇಳೋದು ಹೇಳಿ. ಇಂತಹ ಘಟನೆಯೊಂದು ಜಿಲ್ಲೆಯ ಎಸ್ಪಿ ಕಚೇರಿಯಲ್ಲಿ ನಡೆದಿದೆ. ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಖಜಾನೆಯಲ್ಲಿದ್ದ ಹಣ ಕಳ್ಳತನವಾಗಿದ್ದು, ತನಿಖೆ ಆರಂಭವಾಗಿದೆ.
ಹಣ ಕಳವಾಗಿರುವ ಬಗ್ಗೆ ಎಸ್ಪಿಗೆ ನಗದು ಶಾಖೆಯ ವಿಷಯ ನಿರ್ವಾಹಕ ದೂರು ನೀಡಿದ್ದಾರೆ. ಪೊಲೀಸ್ ಇಲಾಖೆಗೆ ವಿವಿಧ ಮೂಲಗಳಿಂದ ಸಂಗ್ರಹವಾಗಿದ್ದ 16.96 ಲಕ್ಷ ರೂಪಾಯಿ ಹಣವನ್ನು ಎಸ್ಪಿ ಕಚೇರಿಯ ಖಜಾನೆಯಿಂದ ಲೂಟಿ ಮಾಡಲಾಗಿದೆ. ಪೊಲೀಸ್ ಸಿಬ್ಬಂದಿಯೇ ಕಳ್ಳತನ ಮಾಡಿದ್ದಾರೆ ಎಂಬ ಅನುಮಾನ ಸಹ ವ್ಯಕ್ತವಾಗಿದೆ.
2020-21ನೇ ಸಾಲಿನಲ್ಲಿ ಪೊಲೀಸ್ ಫ್ಲ್ಯಾಗ್ ಮಾರಾಟದಿಂದ 7,38,450 ರೂಪಾಯಿ, ಜೊತೆಗೆ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣದಿಂದ ವಸೂಲಾದ ದಂಡ 9,28,000 ರೂಪಾಯಿ ಸಂಗ್ರಹವಾಗಿತ್ತು. ಈ ಹಣವನ್ನು ಪೊಲೀಸ್ ವರಿಷ್ಠಾಧಿಕಾರಿ ಅವರ ನಗದು ಶಾಖೆಯ ಖಜಾನೆಯಲ್ಲಿ ಇರಿಸಲಾಗಿತ್ತು. ಈ ಹಣವನ್ನು ಸಂದಾಯ ಮಾಡುವುದಕ್ಕಾಗಿ ಖಜಾನೆ ಬೀಗ ತೆಗೆಯಲು ಹೋದಾಗ ಹಣ ಕಳುವಾಗಿರುವುದು ಬೆಳಕಿಗೆ ಬಂದಿದೆ.
ನಗದು ಶಾಖೆಯ ವಿಷಯ ನಿರ್ವಾಹಕ ರಂಜಿತ್ ಕುಮಾರ್ ಅವರು ಈ ಹಣವನ್ನು ಖಜಾನೆಯಲ್ಲಿಟ್ಟಿದ್ದರಂತೆ. ಮೊನ್ನೆಯಷ್ಟೇ ಹಣವನ್ನು ಸರ್ಕಾರಕ್ಕೆ ಸಂದಾಯ ಮಾಡಲು ಖಜಾನೆ ಬಾಗಿಲು ತೆಗೆಯುವುದಕ್ಕೆ ಹೋಗಿದ್ದಾರೆ. ಈ ವೇಳೆ ಅದರ ಬೀಗ ತೆಗೆದಿರುವುದು ಗೊತ್ತಾಗಿದೆ. ಡೋರ್ ತೆಗೆದು ನೋಡಿದಾಗ ಹಣ ಕಳ್ಳತನವಾಗಿರುವುದು ತಿಳಿದಿದೆ. ಹೀಗಾಗಿ, ರಂಜಿತ್ ಕುಮಾರ್ ಅವರು ಎಸ್ಪಿಗೆ ದೂರು ನೀಡಿದ್ದಾರೆ.
ಎಸ್ಪಿ ಕಚೇರಿಯ ಖಜಾನೆ ಕಳ್ಳತನ ವಾಗಿರುವುದರಿಂದ ಬೇರೆಯವರು ಹೊರಗಡೆಯಿಂದ ಬಂದು ಕಳ್ಳತನ ಮಾಡುವುದು ಕಷ್ಟವಾಗಿದೆ. ಆದ್ರೆ, ಕಚೇರಿಯ ಸಿಬ್ಬಂದಿಯಿಂದಲೇ ಕಳ್ಳತನ ಆರೋಪ ಕೇಳಿ ಬಂದಿದೆ. ಸಿಬ್ಬಂದಿಯಾದ ದಲಾಯತ್ ಮತ್ತು ವಿನೋದ್ ಕುಮಾರ್ ಎಂಬುವರಿಂದ ಈ ಹಿಂದೆ ಖಜಾನೆ ಕೀ ಕಳೆದು ಹೋಗಿದೆ ಎಂದು ಹೇಳಿದ್ರು. ಮತ್ತೆ ಕೀ ಸಿಕ್ಕಿತ್ತು. ಆದ್ರೆ, ಎರಡು ದಿನಗಳಲ್ಲಿ ಹಣ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಈ ಇಬ್ಬರು ಖಜಾನೆಯ ಕಡೆ ಹೆಚ್ಚು ಹೋಗುತ್ತಿದ್ದನ್ನು ಸಿಬ್ಬಂದಿ ಗಮನಿಸಿದ್ದು, ಇಬ್ಬರ ಮೇಲೆ ಅಲ್ಲಿನ ಸಿಬ್ಬಂದಿ ಅನುಮಾನ ವ್ಯಕ್ತಪಡಿಸಿದ್ದಾರೆ. ಆದ್ರೆ, ಎಸ್ಪಿ ಕಚೇರಿ ಖಜಾನೆಯ ಹಣ ಕಳ್ಳತನ ಬಗ್ಗೆ ತನಿಖೆ ನಂತರವಷ್ಟೇ ಪ್ರಕರಣ ಬಯಲಿಗೆ ಬರಲಿದೆ.