ಕೊಡಗು:ಸೊಬಗಿನಲ್ಲಿ ಕರ್ನಾಟಕದ ಕಾಶ್ಮೀರ ಎನಿಸಿರುವ ಕೊಡಗಿನಲ್ಲಿ ಉಗ್ರರ ಹಾವಳಿ ಹೆಚ್ಚುತ್ತಿದ್ದು, ಉಗ್ರರು ಅಟ್ಟಹಾಸದ ವಿಚಾರದಲ್ಲಿಯೂ ಜಿಲ್ಲೆ ಕಾಶ್ಮೀರವನ್ನು ಹೋಲುತ್ತಿರುವುದು ಆತಂಕಕ್ಕೀಡುಮಾಡುತ್ತಿದೆ.
ಕೊಡಗು, ಚಾಮರಾಜನಗರ ಮತ್ತು ಮಂಡ್ಯದಲ್ಲಿ ಉಗ್ರರು ವಿವಿಧ ಸಂದರ್ಭಗಳಲ್ಲಿ ಕಾರ್ಯಾಚರಣೆ ನಡೆಸಲು ಮುಂದಾಗಿದ್ದವು. ಈ ಮೂರು ಜಿಲ್ಲೆಗಳಲ್ಲಿರುವ ಉಗ್ರರಿಗೆ ಮಂಡ್ಯದಲ್ಲಿಯೇ ತರಬೇತಿ ನೀಡುವ ಸಂಚನ್ನೂ ರೂಪಿಸಲಾಗಿತ್ತು ಎನ್ನುವುದನ್ನು ಎನ್‍ಐಎ ಬಹಿರಂಗಪಡಿಸಿದೆ. ಇದಕ್ಕೆ ಪೂರಕ ಎನ್ನುವಂತೆ ಕೊಡಗು ಜಿಲ್ಲೆ ವಿರಾಜಪೇಟೆ ಶಾಸಕ ಕೆ. ಜಿ. ಬೋಪಯ್ಯ ಕೂಡ ಪಶ್ಚಿಮಘಟ್ಟವು ಉಗ್ರರ ನೆಲೆಯಾಗುತ್ತಿದೆ ಎಂದು ಗಂಭೀರವಾಗಿ ಕಳವಳ ವ್ಯಕ್ತಪಡಿಸಿದ್ದಾರೆ.
ಕೊಡಗಿನ ಕಾಫಿ ಬೆಳೆಗಾರರು ಅಸ್ಸೋಂ ಕಾರ್ಮಿಕರನ್ನು ತಮ್ಮ ತೋಟಗಳಿಗೆ ಕರೆತರುತ್ತಿದ್ದಾರೆ. ಈ ವೇಳೆ, ಅಸ್ಸೋಂ ಕಾರ್ಮಿಕರ ಹೆಸರಿನಲ್ಲಿ ಬಾಂಗ್ಲಾ ದೇಶಿಗರು ಕೊಡಗು ಸೇರುತ್ತಿದ್ದಾರೆ. ಇನ್ನೂ ಹೀಗೆ ತೋಟಗಳಲ್ಲಿ ನೆಲೆಯೂರುವ ಅಸ್ಸೋಂ ಕಾರ್ಮಿಕರ ಮಾಹಿತಿಯನ್ನು ದಾಖಲೆ ಸಹಿತ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ನೀಡುವಂತೆ ಸೂಚಿಸಲಾಗಿದೆ. ಆದರೆ, ಆ ಕೆಲಸ ಇನ್ನೂ ಸರಿಯಾಗಿ ಆಗಿಲ್ಲ. ಜೊತೆಗೆ ಕೇರಳದಿಂದ ಕರ್ನಾಟಕಕ್ಕೆ ಸುಲಭವಾಗಿ ಉಗ್ರರು ನುಸುಳುವ ಸಾಧ್ಯತೆ ಇದೆ. ಹೀಗಾಗಿ ಕೇರಳಕ್ಕೆ ಹೊಂದಿಕೊಂಡಿರುವ ಕೊಡಗಿನ ಕುಟ್ಟ ಚೆಕ್ ಪೋಸ್ಟ್, ಮಾಕುಟ್ಟ ಚೆಕ್ ಪೋಸ್ಟ್ಗಳಲ್ಲಿ ಕಠಿಣ ತಪಾಸಣೆ ಮಾಡುವಂತೆ ಬೋಪಯ್ಯ ಆಗ್ರಹಿಸಿದ್ದಾರೆ.