ಕೊಡಗು: ಉತ್ತರ ಖಂಡದ ಜೋಶಿಮಾಥ್ ಎಂಬಲ್ಲಿ ಭಾರತೀಯ ಭೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕೊಡಗು ಮೂಲದ ಯೋಧ ಹೃದಯಾಘಾತದಿಂದ ಮೃತ್ತಪಟ್ಟಿದ್ದ, ಇಂದು ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಕಿರಂಗದೋರು ಗ್ರಾಮ ನಿವಾಸಿ ನಾಪಂಡ ಎನ್.ಸಿ. ಮಹೇಶ್(46) ಮೃತ ಯೋಧ. ಇವರು ಉತ್ತರ ಖಂಡದ ಜೋಶಿಮಾಥ್ ಎಂಬಲ್ಲಿ ಭಾರತೀಯ ಭೂ ಸೇನೆಯ ಇಎಂಇ (ಇಲೆಕ್ಟ್ರಾನಿಕ್ಸ್ ಅಂಡ್ ಮೆಕಾನಿಕಲ್ ಇಂಜಿನಿಯರ್) ವಿಭಾಗದಲ್ಲಿ ಜೆಸಿಒ ಹುದ್ದೆಯಲ್ಲಿದ್ದರು.
ಕಳೆದ 4 ದಿನಗಳ ಹಿಂದೆ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಹೃದಯಾಘಾತಕ್ಕೀಡಾಗಿ ವಿಧಿವಶರಾವಗಿದ್ದ ಮಹೇಶ್ ಅವರ ಪಾರ್ಥೀವ ಶರೀರವನ್ನು ಬುಧವಾರ ಡೆಹರಾಡೂನ್‌ನಿಂದ ಸ್ವೀಕರಿಸಿ, ನಿನ್ನೆ(ಗುರುವಾರ) ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಯಿತು. ಸುಬೇದಾರ್ ವಿ. ಮಣಿ, ಹವಾಲ್ದಾರ್ ಪ್ರಸಾದ್, ನಾಯಕ್ ಟಿ.ಆರ್. ರಾಹುಲ್ ಅವರೊಂದಿಗೆ ಎಂಇಜಿ ನಿವೃತ್ತ ಸಿಬ್ಬಂದಿ ಮಡಿಕೇರಿಯ ನಂದಿನೆರವಂಡ ಕರುಂಬಯ್ಯ ಅವರು ಬೆಂಗಳೂರಿನಿಂದ ಆ್ಯಂಬುಲೆನ್ಸ್ ಮೂಲಕ ಮೃತದೇಹವನ್ನು ನಿನ್ನೆ ಸಂಜೆ ಹುಟ್ಟೂರಿಗೆ ಕರೆತಂದಿದ್ದರು.
ಇದನ್ನೂ ಓದಿ:ಕಡಬದಲ್ಲಿ ಧ್ವಜಾರೋಹಣ ವೇಳೆ ಮೃತಪಟ್ಟ ಮಾಜಿ ಯೋಧನಿಗೆ ಅಂತಿಮ ವಿದಾಯ
ನಿನ್ನೆ ಸಂಜೆಯೇ ಯೋಧನ ಪಾರ್ಥಿವ ಶರೀರ ಸೋಮವಾರ ಪೇಟೆ ಪಟ್ಟಣಕ್ಕೆ ಆಗಮಿಸುವ ಸುದ್ದಿ ತಿಳಿದಂತೆ ನೂರಾರು ಮಂದಿ ಪಟ್ಟಣದಲ್ಲಿ ಜಮಾವಣೆಗೊಂಡರು. ಆ್ಯಂಬುಲೆನ್ಸ್ ಆಗಮಿಸುತ್ತಿದ್ದಂತೆ 'ಭಾರತ್ ಮಾತಾ ಕೀ ಜೈ, ಅಮರ್ ರಹೇ ಅಮರ್ ರಹೇ, ಜೆಸಿಓ ಮಹೇಶ್ ಅಮರ್ ರಹೇ' ಎಂದು ಘೋಷಣೆಗಳನ್ನು ಮೊಳಗಿಸಿ ಪುಷ್ಪನಮನ ಸಲ್ಲಿಸಿದರು.