ಕರ್ನಾಟಕ

karnataka

By ETV Bharat Karnataka Team

Published : Dec 22, 2023, 7:01 AM IST

ETV Bharat / state

ಕೊಡಗು ಪೊಲೀಸ್​ ಇಲಾಖೆಯಲ್ಲಿ ಸಿಂಹದಂತೆ ಕಾರ್ಯನಿರ್ವಹಿಸುತ್ತಿದ್ದ ಲಿಯೋ ಶ್ವಾನ ಸಾವು

ಕೊಡಗು ಪೊಲೀಸ್ ಇಲಾಖೆಯಲ್ಲಿ ಅಪರಾಧ ಪತ್ತೆ ಕಾರ್ಯಾಚರಣೆಯಲ್ಲಿ ಸೇವೆ ಸಲ್ಲಿಸಿದ್ದ ಶ್ವಾನ ಲಿಯೋ ಸಾವನ್ನಪ್ಪಿದ್ದು, ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡಲಾಗಿದೆ.

leo
ಲಿಯೋ

ಕೊಡಗು:ಅಪರಾಧ ಪತ್ತೆ ಕಾರ್ಯಾಚರಣೆಯಲ್ಲಿ ಪೊಲೀಸ್​ ಇಲಾಖೆಯೊಂದಿಗೆ10 ವರ್ಷ ಸೇವೆ ಸಲ್ಲಿಸಿದ್ದ ಗಂಡು ಶ್ವಾನ ಲಿಯೋ ಅನಾರೋಗ್ಯದಿಂದ ಸಾವನ್ನಪ್ಪಿದೆ. ತನ್ನ ಕರ್ತವ್ಯ ಪರತೆಗೆ ಒಟ್ಟು ಐದು ಪದಕ ಪಡೆದಿದ್ದ ಲಿಯೋ ಶ್ವಾನದಳ ಸಿಬ್ಬಂದಿ ಮನಮೋಹನ್ ಗರಡಿಯಲ್ಲಿ ಪಳಗಿತ್ತು. ಲಿಯೋ ಅಗಲಿಕೆಗೆ ಪೊಲೀಸ್ ಸಿಬ್ಬಂದಿ ಕಂಬನಿ ಮಿಡಿದಿದ್ದು, ಮಡಿಕೇರಿ ಡಿಆರ್ ಪೊಲೀಸ್ ಆವರಣದಲ್ಲಿ ಸಕಲ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡಲಾಗಿದೆ.

ಮೃತ ಲಿಯೋ ಶ್ವಾನಕ್ಕೆ ಸಕಲ ಗೌರವ

ಕೊಡಗಿನ ಅಪರಾಧ ಜಗತ್ತಿನಲ್ಲಿ ಮಿಂಚಿನ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡು ಹಲವಾರು ಪ್ರಕರಣಗಳನ್ನು ಭೇದಿಸಿ ಹತ್ತು ವರ್ಷಗಳ ನಿರಂತರ ಸೇವೆಯನ್ನು ಮಾಡಿ ಹಲವು ಪದಕಗಳನ್ನು ಮುಡಿಗೇರಿಸಿಕೊಂಡ ಲಿಯೋ ಇನ್ನು ನೆನಪು ಮಾತ್ರ.

2013 ರಲ್ಲಿ ಕೊಡಗು ಜಿಲ್ಲಾ ಶ್ವಾನದಳ ಘಟಕಕ್ಕೆ ಸೇರ್ಪಡೆಗೊಂಡ ಲಿಯೋ ಕೊಡಗು ಜಿಲ್ಲಾ ಶ್ವಾನದಳ ಘಟಕದ ಹ್ಯಾಂಡ್ಲರ್​ಗಳಾದ ಮನಮೋಹನ್​ ಬಿ.ಪಿ ಹಾಗೂ ಶಿವ ಎಂ.ಆರ್​​ ಅವರಿಂದ ತರಬೇತಿ ಪಡೆದು ಅಪರಾಧ ಕೃತ್ಯ ನಡೆಸಿದವರನ್ನು ಪತ್ತೆ ಹಚ್ಚುವ ಮೂಲಕ ಹಲವಾರು ಪ್ರಕರಣಗಳನ್ನು ಭೇದಿಸಲು ಪೊಲೀಸ್ ಇಲಾಖೆಗೆ ಸಹಕಾರಿಯಾಗಿತ್ತು.

ಲಿಯೋ ಒಟ್ಟು 380 ಅಪರಾಧ ಪ್ರಕರಣ ಪತ್ತೆ ಕಾರ್ಯದಲ್ಲಿ ಭಾಗಿಯಾಗಿತ್ತು. 46 ಅಪರಾಧ ಕೃತ್ಯ ಎಸಗಿದ್ದವರನ್ನು ಪತ್ತೆ ಮಾಡಿತ್ತು. 22 ಪ್ರಕರಣಗಳಲ್ಲಿ ಅಪರಾಧಿಗಳ ಸುಳಿವನ್ನು ನೀಡಿತ್ತು. 2018 ರಲ್ಲಿ ಜಿಲ್ಲೆಯಲ್ಲಿ ನಡೆದ ಭೂಕುಸಿತ ಸಂದರ್ಭ ಕಾಣೆಯಾದ ನಾಲ್ಕು ಮೃತದೇಹಗಳನ್ನು ಪತ್ತೆ ಮಾಡಿತ್ತು. ಹೀಗೆ ಹತ್ತು ಹಲವಾರು ಪ್ರಕರಣಗಳನ್ನು ಭೇದಿಸಿದ ಲಿಯೋ ಕೊಡಗಿನ ಗಡಿ ಚೆಕ್ ಪೋಸ್ಟ್​ಗಳಲ್ಲಿ ಮಾದಕ ವಸ್ತುಗಳ ಸಾಗಾಟವನ್ನು ಕೂಡ ಪತ್ತೆ ಮಾಡಿರುತ್ತದೆ.

ಮೃತ ಲಿಯೋ ಶ್ವಾನಕ್ಕೆ ಸಕಲ ಗೌರವ

ಕ್ರೀಡೆಯಲ್ಲೂ ಕೂಡ ತನ್ನನ್ನು ತೊಡಗಿಸಿಕೊಂಡಿದ್ದ ಲಿಯೋ ರಾಜ್ಯಮಟ್ಟದ ಪೊಲೀಸ್ ಕ್ರೀಡಾಕೂಟದಲ್ಲಿ ಮೂರು ಬಾರಿ ಹಾಗೂ ವಲಯ ಮಟ್ಟದ ಪೊಲೀಸ್ ಕ್ರೀಡಾ ಸ್ಪರ್ಧೆಯಲ್ಲಿ 4 ಬಹುಮಾನಗಳನ್ನು ಪಡೆದಿತ್ತು. ಲಿಯೋ ಒಟ್ಟು ಹತ್ತು ವರ್ಷ ಒಂಬತ್ತು ತಿಂಗಳು ಕೊಡಗು ಜಿಲ್ಲಾ ಪೊಲೀಸ್ ಘಟಕದಲ್ಲಿ ತನ್ನ ಸೇವೆಯನ್ನು ನೀಡಿ ನವೆಂಬರ್ 17 ರಂದು ನಿವೃತ್ತಿ ಹೊಂದಿ ಗುರುವಾರ ಅನಾರೋಗ್ಯದಿಂದ ಮೃತಪಟ್ಟಿದೆ.

ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ರಾಮರಾಜನ್​ ಲಿಯೋನ ಕರ್ತವ್ಯದ ಅವಧಿಯಲ್ಲಿನ ಅತ್ಯುತ್ತಮ ಸೇವೆಯನ್ನು ಎಲ್ಲಾ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಪರವಾಗಿ ಶಾಂತಿಯನ್ನು ಕೋರಿ ಸಕಲ ಗೌರವ ವಂದನೆಯನ್ನು ಸಲ್ಲಿಸಿದರು. ಲಿಯೋ ಇನ್ನು ಕೊಡಗು ಜಿಲ್ಲಾ ಶ್ವಾನ ಘಟಕದಲ್ಲಿ ನೆನಪು ಮಾತ್ರ. ಆದರೆ ಲಿಯೋನ ಸೇವೆ ಅವಿಸ್ಮರಣೀಯ.

ಇದನ್ನೂ ಓದಿ:ಹೆಸರಿಗೆ ತಕ್ಕಂತೆ ಸೌಮ್ಯ, ಅಪರಾಧ ಪ್ರಕರಣ ಭೇದಿಸುವಲ್ಲಿ ಚುರುಕಾಗಿದ್ದ ಶ್ವಾನ ವಿಧಿವಶ.. ದಾವಣಗೆರೆ ಪೊಲೀಸ್​ ಇಲಾಖೆಗೆ ಆಘಾತ

ABOUT THE AUTHOR

...view details