ಮಡಿಕೇರಿ: ಚಿನ್ನಾಭರಣ ಸೇರಿದಂತೆ ಕೆಲ ವಸ್ತುಗಳನ್ನು ಕಳೆದುಕೊಂಡು ಕಂಗಾಲಾಗಿದ್ದ ಮಡಿಕೇರಿ ಮಂದಿಯ ವಸ್ತುಗಳು ಇದೀಗ ಅವರ ಕೈ ಸೇರಿವೆ. ಸುಮಾರು ಒಂದು ವರ್ಷದ ನಂತರ ಕಳವು ಆಗಿದ್ದ ಚಿನ್ನಾಭರಣಗಳು ಮಾಲೀಕರ ಕೈ ಸೇರಿವೆ. ಕೊಡಗು ಪೊಲೀಸರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು, ವಾಹನಗಳನ್ನು ವಾರಸುದಾರರಿಗೆ ಹಸ್ತಾಂತರ ಮಾಡಿದ್ದಾರೆ.
ಮಡಿಕೇರಿಯಲ್ಲಿರುವ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸೋಮವಾರ ಪುರಾತನ ವಿಗ್ರಹಗಳು, ವಾಹನಗಳು, ಚಿನ್ನಾಭರಣಗಳನ್ನು ಮಾಲೀಕರಿಗೆ ತಲುಪಿಸುವ ಕೆಲಸವಾಗಿದೆ. ವರ್ಷದ ಹಿಂದೆ ಕೊಡಗು ಜಿಲ್ಲೆಯ ಸೋಮವಾರಪೇಟೆ, ಗೋಣಿಕೊಪ್ಪಲು, ವೀರಾಜಪೇಟೆ, ಮಡಿಕೇರಿ ಸೇರಿದಂತೆ ವಿವಿಧೆಡೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳು, ಬೆಲೆ ಬಾಳುವ ವಿಗ್ರಹಗಳು, ವಾಹನಗಳು ಕಳ್ಳತನವಾಗಿದ್ದವು. ಎಲ್ಲ ಪ್ರಕರಣಗಳನ್ನು ಭೇದಿಸಿರುವ ಕೊಡಗು ಪೊಲೀಸರು ಕಳ್ಳತನವಾಗಿದ್ದ ಸ್ವತ್ತುಗಳನ್ನು ವಶಕ್ಕೆ ಪಡೆದಿದ್ದರು.