ಮಡಿಕೇರಿ(ಕೊಡಗು): ಸಂಪೂರ್ಣ ಬೆಟ್ಟ ಗುಡ್ಡಗಳಿಂದಲೇ ಕೂಡಿರುವ ಕೊಡಗಿನಲ್ಲಿ ಕಳೆದ 3 ವರ್ಷಗಳಿಂದ ಆಗುತ್ತಿರುವ ಭೂ ಕುಸಿತಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ. ಕೆಲವು ಬೆಟ್ಟಗಳಲ್ಲಿ ಮತ್ತೆ ಬಿರುಕು ಬಿಟ್ಟಿದ್ದು, ಇದು ಜನರ ನಿದ್ದೆಗೆಡಿಸಿದೆ.
ಬೆಟ್ಟ ಕುಸಿಯುವ ಭೀತಿ.. ನಿದ್ದೆ ಬಿಟ್ಟ ಅಯ್ಯಪ್ಪ ಬೆಟ್ಟ ತಪ್ಪಲಿನ ನಿವಾಸಿಗಳು.. ಮಂಜಿನ ನಗರಿ, ಕರ್ನಾಟಕದ ಕಾಶ್ಮೀರ ಎಂದೇ ಕರೆಸಿಕೊಳ್ಳುವ ಕೊಡಗಿನಲ್ಲಿ ಬೆಟ್ಟದ ಮೇಲೆ ಮನೆ, ಹೋಂ ಸ್ಟೇ, ರೆಸಾರ್ಟ್ ಮಾಡೋದು ಅಂದ್ರೆ ಅದೊಂತರ ಪ್ರತಿಷ್ಠೆ ಆಗಿತ್ತು. ಬೆಟ್ಟದ ಮೇಲೆ ಮನೆ, ಹೋಂ ಸ್ಟೇ, ರೆಸಾರ್ಟ್ ಮಾಡಿ ಪ್ರವಾಸಿಗರನ್ನು ಸೆಳೆಯುತ್ತಿದ್ದ ವ್ಯಾಪಾರಸ್ಥರು, ಕಳೆದ ಮೂರು ವರ್ಷಗಳಿಂದ ಆಗುತ್ತಿರುವ ಭೂಕುಸಿತದಿಂದ ಬೆಟ್ಟಗಳ ಸಹವಾಸವೇ ಬೇಡ ಎನ್ನುವಂತಾಗಿದೆ. ವಿರಾಜಪೇಟೆ ನಗರದ ಅಯ್ಯಪ್ಪ ಬೆಟ್ಟದ ತುದಿಯವರೆಗೆ ನೂರಾರು ಜನರು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಈ ವರ್ಷವೂ ಆಗಸ್ಟ್ ಆರಂಭದಿಂದಲೂ ಭಾರೀ ಮಳೆಯಾಗುತ್ತಿದ್ದು, ಬೆಟ್ಟದ ಹಲವೆಡೆ ಸಣ್ಣ ಪ್ರಮಾಣದಲ್ಲಿ ಕುಸಿದಿದೆ.
ಕಳೆದ ಬಾರಿ ಬೆಟ್ಟ ಬಿರುಕು ಬಿಟ್ಟ ಜಾಗಕ್ಕೆ ಸಿಮೆಂಟ್ ಹಾಕಿ ಮುಚ್ಚಲಾಗಿತ್ತು. ಈ ಬಾರಿ ಬೆಟ್ಟದ ಮೇಲಿರುವ ಹಲವು ಮನೆಗಳ ಗೋಡೆಗಳಲ್ಲಿ ಬಿರುಕು ಮೂಡಿದ್ದು, ಇದು ಜನರ ನಿದ್ದೆಗೆಡಿಸಿದೆ. ಕೆಲವು ದಿನಗಳ ಹಿಂದೆಯಷ್ಟೇ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿದುಬಿದ್ದು, ಅರ್ಚಕರ ಕುಟುಂಬ ನಾಪತ್ತೆಯಾಗಿತ್ತು. ಈ ದುರಂತದಿಂದ ಬೆಚ್ಚಿಬಿದ್ದಿರುವ ಅಯ್ಯಪ್ಪ ಬೆಟ್ಟದ ನಿವಾಸಿಗಳು ಹಗಲು ರಾತ್ರಿ ಆತಂಕದಲ್ಲೇ ಬದುಕುತ್ತಿದ್ದಾರೆ.
ವರ್ಷದ ಹಿಂದೆ ಈ ಬೆಟ್ಟ ಬಿರುಕು ಬಿಟ್ಟಾಗ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿತ್ತು. ಬಳಿಕ ಸಿಮೆಂಟ್ ಹಾಕಿ ಬಿರುಕಿಗೆ ನೀರು ಹೋಗದಂತೆ ಮುಚ್ಚಲಾಗಿತ್ತು. ಆದರೆ ಬೆಟ್ಟ ಬೇರೆಡೆಗಳಲ್ಲಿ ಅಲ್ಲಲ್ಲಿ ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ಎಲ್ಲಾ ಕುಟುಂಬಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಚಿಂತಿಸಲಾಗಿದೆ. ಮುಂದಿನ ಮಳೆಗಾಲದ ಹೊತ್ತಿಗೆ ಶಾಶ್ವತ ಪರಿಹಾರ ಒದಗಿಸಲಾಗುವುದು ಎಂದು ವಿರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ರಾಜು ತಿಳಿಸಿದ್ದಾರೆ.