ಕೊಡಗು: ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಮೊದಲ ಮಳೆಗೆ ಜಿಲ್ಲೆಯ ಹಲವು ಕಡೆ ಅನಾಹುತಗಳು ಸಂಭವಿಸಿವೆ. ನದಿ, ತೋರೆ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದು. ಭಾರಿ ಗಾಳಿ ಮಳೆಗೆ ಅನಾಹುತಗಳು ಸಂಭವಿಸಿದೆ.
ಜೆಸಿಬಿ ಚಾಲಕ ಪಾರು: ವಿರಾಜಪೇಟೆಯ ಹಾತ್ತೂರು ಬಳಿ ಹಾಗೂ ಮಾದಪುರ ಸಮೀಪದ ಮಕ್ಕಂದೂರಿನಲ್ಲಿ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಜನ ಪರದಾಡಿದ್ದಾರೆ. ಹಾತ್ತೂರಿನಲ್ಲಿ ಜೆಸಿಬಿ ಮೇಲೆ ಮರ ಬಿದ್ದಿದ್ದು, ಕೂದಳೆಲೆ ಅಂತರದಲ್ಲಿ ಜೆಸಿಬಿ ಚಾಲಕ ಪಾರಾಗಿದ್ದಾನೆ. ಅಲ್ಲದೇ ಭಾರಿ ಮಳೆಗೆ ರಸ್ತೆಗಳು ಕಾಣದೇ ಅಪಘಾತಗಳು ಸಂಭವಿಸುವ ದೃಶ್ಯ ಕೊಡಗು ಜಿಲ್ಲೆಯಲ್ಲಿ ಸಾಮಾನ್ಯವಾಗಿ ಬಿಟ್ಟಿದೆ.
ಓರ್ವ ಸಾವು: ಕುಶಾಲನಗರ ಸಮೀಪದ ಕೊಡಗರ ಹಳ್ಳಿ ಬಳಿ ಕಾರು ಅಪಘಾತಗೊಂಡು ಓರ್ವ ಜೀವ ಕಳೆದುಕೊಂಡಿದ್ದರೆ, ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಮಡಿಕೇರಿ ಸಮೀಪದ ಸಿಂಕೋನ ಬಳಿ ರಸ್ತೆಗೆ ಅಡ್ಡಾಲಾಗಿ ಬಿದ್ದಿದೆ, ಪರಿಣಾಮ ಒಂದು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು, ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಕೆಲಸಕ್ಕೆ ತೆರಳುವರು ಪರದಾಡಿದ್ದಾರೆ.