ಕೊಡಗು :ಜಾನುವಾರುಗಳ ವ್ಯಾಪಾರಕ್ಕಾಗಿ ಹೋದ ವ್ಯಕ್ತಿಯೋರ್ವ ಕಾಫಿ ತೋಟವೊಂದರಲ್ಲಿ ಹೆಣವಾಗಿ ಸಿಕ್ಕಿದ್ದು, ಸದ್ಯ ಸಾವಿನ ಸುತ್ತಾ ಅನುಮಾನ ಸೃಷ್ಟಿಯಾಗಿದೆ.
ಬೆಟೋಳಿ ಗ್ರಾಮದ ನಿವಾಸಿ ಮೂಸಾ (65) ಎಂಬಾತ ಮೃತ ವ್ಯಕ್ತಿ. ಮೃತದೇಹ ಕೊಳೆತ ಸ್ಥಿತಿಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ವಿರಾಜಪೇಟೆ ತಾಲೂಕಿನ ಕೊಳತ್ತೂರಿನ ಬಳಿ ವಾರದ ನಂತರ ಈ ಪ್ರಕರಣ ಬೆಳಕಿಗೆ ಬಂದಿವೆ. ಮೂಸಾ ವೃತ್ತಿಯಲ್ಲಿ ದನಗಳ ವ್ಯಾಪಾರಿ. ಹಳ್ಳಿ, ಹಳ್ಳಿಗಳನ್ನು ಸುತ್ತುತ್ತಾ ಜಾನುವಾರುಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದ ಈ ವ್ಯಕ್ತಿ ಎಂದಿನಂತೆ ದನಗಳ ವ್ಯಾಪಾರಕ್ಕೆ ಹೋಗಿ ಸದ್ಯ ಕಾಫಿ ತೋಟವೊಂದರಲ್ಲಿ ಹೆಣವಾಗಿ ಪತ್ತೆಯಾಗಿದ್ದಾರೆ.
ದನದ ವ್ಯಾಪಾರಕ್ಕೆಂದು ಹೋದವ ಹೆಣವಾಗಿ ಪತ್ತೆ.. ಸಾವಿನ ಸುತ್ತ ಸಂಶಯಗಳ ಹುತ್ತ! ಮೂಸಾ ಏಪ್ರಿಲ್ 7ರಂದು ಆಪ್ತರೊಬ್ಬರ ಬಳಿ ಹಣ ಪಡೆದು ಸಮೀಪದ ಕೋಲ್ಕೋಡು ಗ್ರಾಮಕ್ಕೆ ದನದ ವ್ಯಾಪಾರಕ್ಕೆ ಹೋಗಿದ್ದಾರೆ. ಅಲ್ಲಿ ಗ್ರಾಮಸ್ಥರೊಬ್ಬರಿಂದ ₹18 ಸಾವಿರಕ್ಕೆ ದನಗಳನ್ನು ಖರೀದಿಸಿ ವಾಪಸ್ ಆಗುವ ವೇಳೆ ದಿಢೀರ್ ನಾಪತ್ತೆ ಆಗಿದ್ದರು. ಇದಾದ ಬಳಿಕ ಆತಂಕಕ್ಕೊಳಗಾದ ಮೂಸಾ ಕುಟುಂಬಸ್ಥರು ವಿರಾಜಪೇಟೆ ಡೌನ್ ಸ್ಟೇಷನ್‌ನಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದಾರೆ. ವಾರದ ನಂತರ ಕಾಫಿ ತೋಟದಿಂದ ಕೆಟ್ಟ ವಾಸನೆ ಬರುತ್ತಿರೋದರ ಬಗ್ಗೆ ಸ್ಥಳೀಯರೊಬ್ಬರು ಪೊಲೀಸರಿಗೆ ತಿಳಿಸಿದ್ದಾರೆ.
ಹಸುಗಳನ್ನು ಖರೀದಿಸಿದ ಬಳಿಕ ಗುಂಪು ಸೇರಿ ಹಲ್ಲೆ ಮಾಡಿ ಕೊಂದಿದ್ದಾರೆ ಎಂದು ತಮ್ಮ ತಂದೆಯ ಸಾವಿನ ಬಗ್ಗೆ ಮಕ್ಕಳು ಸಂಶಯ ವ್ಯಕ್ತಪಡಿಸಿದ್ದಾರೆ. ಎರಡು ದಿನಗಳ ಹಿಂದಷ್ಟೇ ಬೆಟ್ಟೋಳಿ ಗ್ರಾಮದ ಗುಂಪೊಂದು ಮೂಸಾರವರನ್ನು ಹುಡುಕಲು ಬಾಳಗೋಡುವಿಗೆ ಹೋಗಿದ್ದಾಗ ಎರಡು ಊರಿನ ಕಡೆಯ ಗುಂಪುಗಳ ನಡುವೆ ಪರಸ್ಪರ ಹಲ್ಲೆ ನಡೆದು ಕೆಲವರ ವಿರುದ್ಧ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಆಕಸ್ಮಿಕ ಸಾವಾಗಿದ್ದರೆ ಹೀಗೆ ಇರುತ್ತಿರಲಿಲ್ಲ, ಚಪ್ಪಲಿ ಒಂದು ಕಡೆ, ಬ್ಯಾಗ್ ಇನ್ನೆಲ್ಲೋ ಬಿದ್ದಿದೆ, ಇದೊಂದು ಕೊಲೆ. ಇದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕು, ಕೊಲೆಗಡುಕರಿಗೆ ಶಿಕ್ಷೆ ಆಗಲೇಬೇಕು ಎಂದು ಮೃತನ ಸಂಬಂಧಿಕರು ಆಗ್ರಹಿಸಿದ್ದಾರೆ.
ಮೊಣಕೈ ಮೇಲೆಲ್ಲಾ ಗಾಯದ ಗುರುತಿವೆ. ಹಸುವಿನ ಮೇಲೂ ಗಾಯವಾಗಿದೆ. ಇದೊಂದು ಸಹಜ ಸಾವೇ ಆಗಿದ್ರೆ ಹಲ್ಲೆ ಏಕೆ ಮಾಡಬೇಕಿತ್ತು ಎಂಬೆಲ್ಲ ಅನುಮಾನ ವ್ಯಕ್ತಪಡಿಸಿ ಪ್ರಕರಣ ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದಾರೆ. ತನಿಖೆ ಬಳಿಕವಷ್ಟೇ ವಾಸ್ತವ ಸಂಗತಿ ತಿಳಿಯಬೇಕಿದೆ.