ಮಡಿಕೇರಿ :ಜಿಲ್ಲೆಯ ಸೋಮವಾರಪೇಟೆ ತಾಲೂಕು ಜಂಬೂರು ಬಡಾವಣೆಯ ನಿವಾಸಿಗಳು ನೀರಿನ ವ್ಯವಸ್ಥೆ ಇಲ್ಲದೇ, ಮಳೆ ನೀರನ್ನು ಸಂಗ್ರಹಿಸಿ ಬಳಸುವ ಪರಿಸ್ಥಿತಿ ಎದುರಾಗಿದೆ. ಕಳೆದ ಬಾರಿ ಉಂಟಾದ ಪ್ರವಾಹದಲ್ಲಿ ನಿರಾಶ್ರಿತರಾದ ಜನರಿಗೆ ಸರ್ಕಾರ ಜಂಬೂರಿನಲ್ಲಿ ಮನೆಗಳನ್ನು ನಿರ್ಮಿಸಿ ಕೊಟ್ಟಿದೆ. ಇರಲು ಒಂದು ಸೂರು ಸಿಕ್ಕಿತ್ತಲ್ಲ ಎಂದು ಸಂತಸಗೊಂಡಿದ್ದ ಜನರು, ಇದೀಗ ನೀರಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪ್ರವಾಹ ಸಂತ್ರಸ್ತರಿಗೆ ಸರ್ಕಾರ ನಿರ್ಮಿಸಿ ಕೊಟ್ಟ ಹೊಸ ಬಡಾವಣೆಯಲ್ಲಿ ಬೋರ್ವೆಲ್ ಕೊರೆದು, ಟ್ಯಾಂಕ್ ನಿರ್ಮಿಸಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಆದರೆ, ಆ ಟ್ಯಾಂಕ್ನಿಂದ ಸರಿಯಾಗಿ ನೀರು ಬರುತ್ತಿಲ್ಲ. ಮೂರು ದಿನಗಳಿಗೊಮ್ಮೆ ನೀರು ಬಂದರೂ, ಅದು ಸ್ವಲ್ಪ ಹೊತ್ತು ಮಾತ್ರ. ಇದರ ಮಧ್ಯೆ ಇದೀಗ ವಿದ್ಯುತ್ ಸಮಸ್ಯೆಯೂ ಇದ್ದು, ಒಟ್ಟಾರೆ ಜನ ನೀರಿಲ್ಲದೇ ಪರದಾಡುವಂತಾಗಿದೆ.