ಕೊಡಗು :ಪ್ರಕೃತಿ ಸೌಂದರ್ಯ, ಆಚಾರ-ವಿಚಾರಗಳಿಂದ ಜಿಲ್ಲೆ ಗಮನ ಸೆಳೆದಿದೆ. ಇದೀಗ ದೇಶದಲ್ಲಿಯೇ ಉತ್ತಮ ವಾಯುಗುಣ ಹೊಂದಿದ ಮೊದಲ ಜಿಲ್ಲೆ ಎಂಬ ಹೆಗ್ಗಳಿಗೆಗೆ ಪಾತ್ರವಾಗಿದೆ. ಕೊಡಗಿನ ಕೇಂದ್ರ ವಾಯುಮಾಲಿನ್ಯ ನಿಯಂತ್ರಣ ಮಂಡಳಿಗೆ ಈ ಸುದ್ದಿ ಗರಿ ಮೂಡಿಸಿದಂತಾಗಿದೆ.
ಎಲ್ಲಿ ನೋಡಿದ್ರು ಬ್ರಹ್ಮಗಿರಿ, ಪುಷ್ಪಗಿರಿಯ ಸುಂದರ ಬೆಟ್ಟಗುಡ್ಡಗಳ ಸಾಲು, ಹಸಿರ ವನರಾಶಿ, ನಡುವೆ ಅಚಾರ-ವಿಚಾರಗಳಿಂದ ವಿಶಿಷ್ಟವಾದ ಸಂಸ್ಕೃತಿ ಹೊಂದಿದ ಜಿಲ್ಲೆಯಾಗಿದೆ. ಈಗ ಇಲ್ಲಿ ಉತ್ತಮ ವಾಯುಗುಣ ಹೊಂದಿದೆ ಎಂಬ ಕಾರಣಕ್ಕೆ ದೇಶದ ಜನ ಕೊಡಗಿನ ಕಡೆ ನೋಡುವಂತಾಗಿದೆ.
ಇಲ್ಲಿನ ಉತ್ತಮ ಜಲ, ನೆಲ,ಗಾಳಿ ಉತ್ತಮ ವಾಯುಗುಣ ಹೊಂದುವಂತೆ ಮಾಡಿದ್ದು ದೇಶದಲ್ಲಿ ಕೊಡಗು ಪ್ರಥಮ ಸಾಲಿನಲ್ಲಿದೆ. ಕರ್ನಾಟಕದ ಗದಗ ಎರಡನೇ ಸ್ಥಾನದಲ್ಲಿದೆ.
ಕೇಂದ್ರ ವಾಯುಮಾಲಿನ್ಯ ಇಲಾಖೆ ದೈನಂದಿನ ಬುಲೆಟಿನ್ ಬಿಡುಗಡೆ ಮಾಡಿದೆ. ಕರ್ನಾಟಕಕ್ಕೆ ಪ್ರಥಮ ಸ್ಥಾನ ಬಂದಿದೆ. ಅದರಲ್ಲಿ ಕೊಡಗು ಮತ್ತು ಗದಗ ಪ್ರಥಮ ಹಾಗೂ ದ್ವಿತೀಯ ಸ್ಥಾನದಲ್ಲಿರುವುದು ಹೆಮ್ಮೆಯ ವಿಷಯವಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಇತರ ರಾಜ್ಯದಲ್ಲಿ ವಾಯು ಗುಣಮಟ್ಟ ತೀವ್ರ ಹದಗೆಡುತ್ತಿರುವ ಬಗ್ಗೆ ಹಲವು ಸುದ್ದಿ ಕೇಳಿ ಬರುತ್ತಿವೆ. ಇಂತಹ ವಾಯು ಗುಣಮಟ್ಟದಿಂದ ಜನರು ಸಾಕಷ್ಟು ತೊಂದರೆ ಎದುರಿಸುವಂತಾಗಿದೆ.