ಕೊಡಗು: ವಿರಾಜಪೇಟೆ ತಾಲೂಕಿನ ಚೆನ್ನಂಗಿ ಹಾಡಿಯ ನಿವಾಸಿಗಳಿಗೆ ಹಾಡಿಯೊಳಗೆ ತಮ್ಮ ಮನೆಗಳಲ್ಲಿ ರಾತ್ರಿ ಮಲಗೋದು ಅಂದ್ರೆ ಸಾವನ್ನ ಎದುರು ಹಾಕಿಕೊಂಡಂತೆ. ಯಾಕಂದ್ರೆ ಪುಂಡಾನೆಯೊಂದು ಈ ಮನೆಗಳ ಮೇಲೆ ದಾಳಿ ಮಾಡಿ 10ಕ್ಕೂ ಅಧಿಕ ಮನೆಗಳನ್ನ ನೆಲಸಮ ಮಾಡಿದೆ. ಮನೆಯಲ್ಲಿದ್ದ ಸಾಮಗ್ರಿ ಸರಂಜಾಮುಗಳೂ ನಾಶವಾಗಿವೆ.
ಕಾಡು ಪ್ರಾಣಿಗಳ ದಾಳಿ ತಡೆಗೆ ಆದಿವಾಸಿಗಳಿಂದ ರಾತ್ರಿ ಪ್ರತಿಭಟನೆ - ಕೊಡಗಿನ ಹಾಡಿಗಳಲ್ಲಿ ಆನೆ ದಾಳಿ
ಕಾಡಾನೆ ಹಾವಳಿ ಹೆಚ್ಚಾಗಿರೋದ್ರಿಂದ ಕೊಡಗು ಜಿಲ್ಲೆಯ ಹಾಡಿಯ ಮಕ್ಕಳು ಶಾಲೆಗೆ ಹೋಗೋದನ್ನೇ ನಿಲ್ಲಿಸಿದ್ದಾರೆ. ಜನರು ಮನೆಯೊಳಗೆ ಮಲಗೋದನ್ನೂ ಕೈ ಬಿಟ್ಟಿದ್ದಾರೆ. ಮಕ್ಕಳು ವೃದ್ಧರು ಎಲ್ಲರೂ ಬಯಲಲ್ಲೇ ಮಲಗುತ್ತಾರೆ. ಅಲ್ಲೇ ಅಡುಗೆ, ಅಲೇ ಊಟ ಮಾಡುವಂತ ದಯನೀಯ ಪರಿಸ್ಥಿತಿ ಎದುರಾಗಿದೆ.
ಆನೆ ಹಾವಳಿಯಿಂದಾಗಿ ರಾತ್ರಿ ಮಲಗೋಕೆ ಜನರಿಗೆ ಧೈರ್ಯ ಬರ್ತಾ ಇಲ್ಲ. ಈ ಕಾಡಾನೆ ಓಡಿಸಲು ಎರಡು ಸಾಕಾನೆ ಕಾವಲು ಕಾಯ್ತಾ ಇದ್ರೂ ಕಾಡಾನೆ ಮಾತ್ರ ಕೇರ್ ಮಾಡ್ತಾ ಇಲ್ಲ. ಆನೆ ಕಾಟದಿಂದಾಗಿ ಈ ಹಾಡಿಯ 15ಕ್ಕೂ ಅಧಿಕ ಮಕ್ಕಳು ಶಾಲೆಯನ್ನೇ ತ್ಯಜಿಸಿದ್ದಾರೆ. ಶಾಲೆಗೆ ತೆರಳುವ ಹಾದಿಯಲ್ಲಿ ಕಾಡಾನೆ ಯಾವಾಗ ದಾಳಿ ಮಾಡುತ್ತದೆ ಎಂದು ಹೇಳುವ ಹಾಗಿಲ್ಲ. ಹಾಗಾಗಿ ಮಕ್ಕಳು ಶಾಲೆಯೇ ಬೇಡವೆಂದು ಕುಳಿತಿದ್ದಾರೆ.
ಆನೆ ಕಾಟದಿಂದ ಬೇಸತ್ತಿರುವ ಈ ಮಂದಿ ಸಾಯುವುದೇ ಆದ್ರೆ ಇಲ್ಲೇ ಒಟ್ಟಿಗೇ ಇದ್ದು ಸಾಯ್ತೇವೆ ಅಂತ ಪಟ್ಟು ಹಿಡಿದು ಇದೀಗ ಅಹೋರಾತ್ರಿ ಧರಣಿ ನಡೆಸ್ತಾ ಇದ್ದಾರೆ. ಇಲ್ಲೇ ಅಡುಗೆ ಮಾಡಿ, ಇಲ್ಲೇ ಮಲಗ್ತಾರೆ. ಹೆಂಗಸರು, ಗಂಡಸರು, ಮಕ್ಕಳು, ವೃದ್ಧರು ಎಲ್ಲರೂ ಬೆಂಕಿ ಗುಡ್ಡೆಯ ಸುತ್ತ ಹಾಡ್ತಾ ಕುಣಿಯುತ್ತಾ ಪ್ರತಿಭಟನೆ ಮಾಡ್ತಾ ಇದ್ದಾರೆ.
ಒಂದೆಡೆ, ಹುಲಿ ಹಾವಳಿ ಮತ್ತೊಂದೆಡೆ ಆನೆಗಳ ಹಾವಳಿಯಿಂದಾಗಿ ಕೊಡಗಿನ ಜನತೆ ಕಂಗಾಲಾಗಿದ್ದಾರೆ. ಅರಣ್ಯ ಇಲಾಖೆ ಆನೆ ಹಾವಳಿ ನಿಯಂತ್ರಿಸಲು ಏನಾದ್ರು ತುರ್ತು ಕ್ರಮ ಕೈಗೊಳ್ಳಬೇಕು ಅನ್ನೋದು ಇವರ ಆಗ್ರಹ.