ಕೊಡಗು: ಜಿಲ್ಲೆಯ ವಿರಾಜಪೇಟೆ ತಾಲೂಕಿನ ಭೇತ್ರಿ ಗ್ರಾಮ ಮಳೆರಾಯನ ಅಬ್ಬರಕ್ಕೆ ಸಿಲುಕಿ ನಲುಗಿದೆ. ಅಗಸ್ಟ್ 5-12ರವರೆಗೆ ಸುರಿದ ಮಳೆಗೆ ಜಿಲ್ಲೆಯ ಜೀವನದಿ ಉಕ್ಕಿ ಹರಿದಿತ್ತು. ದಿನದಿಂದ ದಿನಕ್ಕೆ ನೀರಿನ ಮಟ್ಟವೂ ಏರಿತ್ತು. ಗ್ರಾಮದಲ್ಲಿನ ಸುಮಾರು 80 ಮನೆಗಳು ಭಾಗಶಃ ಮುಳುಗಿದ್ದವು. ಕೊಡಗು-ವಿರಾಜಪೇಟೆ ಸಂಪರ್ಕಿಸುವ ಮೇಲ್ಸೇತುವೆ ಮೇಲೆ ನೀರು ಅಪಾಯದ ಮಟ್ಟ ಮೀರಿ ಹರಿದಿತ್ತು.
ಮಳೆ ನಿಂತು, ನೆರೆ ಕಡಿಮೆಯಾದರೂ ಸಂತ್ರಸ್ತರ ಕಣ್ಣೀರು ಮಾತ್ರ ನಿಂತಿಲ್ಲ.. - ಸಂತ್ರಸ್ತ
ಕೊಡಗು ಜಿಲ್ಲೆಯಲ್ಲಿ ಮಳೆ ನಿಂತು, ನೆರೆ ಕಡಿಮೆಯಾದರೂ ಪ್ರವಾಹಕ್ಕೆ ಸಿಲುಕಿದ ಕುಟುಂಬಗಳ ಕಣ್ಣೀರು ಮಾತ್ರ ನಿಂತಿಲ್ಲ. ಹಲವು ದಿನಗಳಿಂದ ನೀರು ನಿಂತಿದ್ದರಿಂದ ಮನೆಗಳು ಸಂಪೂರ್ಣ ಬಿದ್ದಿವೆ. ಮನೆಯಲ್ಲಿದ್ದ ಎಲ್ಲಾ ವಸ್ತುಗಳು ನಾಶವಾಗಿವೆ. ವಾಸಿಸಲು ಸೂರು ಕಲ್ಪಿಸಿಕೊಡಿ ಅಂತಾರೆ ಗ್ರಾಮಸ್ಥರು.
ಗ್ರಾಮದ ತುಂಬೆಲ್ಲಾ ನೀರು ನುಗ್ಗಿದ ಪರಿಣಾಮ ಗ್ರಾಮಸ್ಥರು ಪ್ರಾಣ ಉಳಿಸಿಕೊಂಡ್ರೆ ಸಾಕು ಎಂದು ಮನೆ ತೊರೆದು ನೆಂಟರ ಮನೆ ಹಾಗೂ ನಿರಾಶ್ರಿತ ಕೇಂದ್ರಗಳಿಗೆ ಹೋಗಿ ಆಶ್ರಯ ಪಡೆದಿದ್ರು. ಪರಿಣಾಮ ಸಾಕಷ್ಟು ಮನೆಗಳು ಹಾನಿಗೀಡಾದರೆ 4-5 ಮನೆಗಳು ನೆಲಸಮವಾಗಿದ್ದವು. ಇಲ್ಲಿನ ಹಿರಿಯರು ಕಂಡಂತೆ 1962ರಲ್ಲಿ ಇಂತಹ ಪ್ರವಾಹ ಸೃಷ್ಟಿಯಾಗಿತ್ತಂತೆ. ಬಿಟ್ಟರೆ ಮತ್ತೆ ಈ ವರ್ಷವೇ ಇಷ್ಟು ಪ್ರಮಾಣದ ನೀರನ್ನು ನಾವು ನೋಡಿದ್ದೆಂದು ಆಶ್ಚರ್ಯ ಪಡ್ತಾರೆ.
ಈವರೆಗೂ ಮನೆ ಬಿದ್ದಿರುವ ಜಾಗಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಒಬ್ಬರು ಬಿಟ್ರೇ ಯಾರೂ ಬಂದು ನೋಡಿಲ್ಲ. ಮನೆ ತುಂಬೆಲ್ಲಾ ನೀರು ತುಂಬಿದ್ದರಿಂದ ನಮ್ಮ ತಾಯಿ ನಮ್ಮನೆಗೆ ಬಂದ್ರು. ಫ್ಯಾನ್, ಮಿಕ್ಸಿ, ಹಾಸಿಗೆ, ಹೊದಿಕೆ, ಬಟ್ಟೆ, ಅಗತ್ಯ ದಾಖಲೆಗಳು ಸೇರಿ ಎಲ್ಲವೂ ನಾಶಗೊಂಡಿವೆ. ನಾವು ಏನನ್ನೂ ಕೇಳ್ತಿಲ್ಲ. ಇದ್ದ ಒಂದು ಮನೆಯೂ ಬಿದ್ದಿದೆ. ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮನೆ ಕಟ್ಟಿಸಿಕೊಡಬೇಕು ಎಂದು ಜಸೀನಾ ಮನವಿ ಮಾಡಿದರು.