ಕೊಡಗು: ಜಿಲ್ಲೆಯಲ್ಲಿ 2018ರ ಜಲ ಪ್ರಳಯದ ಹೊಡೆತಕ್ಕೆ ಸಿಲುಕಿ ಮನೆ, ಆಸ್ತಿ-ಪಾಸ್ತಿ ಕಳೆದುಕೊಂಡು ಬೀದಿ ಪಾಲಾಗಿದ್ದ ನಿರಾಶ್ರಿತರಿಗೆ ಇನ್ನೂ ಸೂರು ಸಿಕ್ಕಿಲ್ಲ. ನಿರ್ಮಾಣವಾಗಿರುವ ಮನೆಗಳನ್ನು ಇನ್ನೂ ಹಂಚಿಕೆ ಮಾಡಿಲ್ಲ. ನಾವು ಬಾಡಿಗೆ ಕಟ್ಟಿಕೊಂಡು ಮಕ್ಕಳನ್ನು ಓದಿಸಿಕೊಂಡು ಜೀವನ ಮಾಡುವುದು ಕಷ್ಟವಾಗಿದೆ. ಶೀಘ್ರವೇ ಮನೆಗಳನ್ನು ಹಂಚಿಕೆ ಮಾಡಿ. ಇಲ್ಲದಿದ್ದರೆ ನಾವೇ ಆ ಮನೆಗೆ ಹೋಗುತ್ತೇವೆ ಎಂದು ಜಿಲ್ಲಾಡಳಿತಕ್ಕೆ ಸಂತ್ರಸ್ತರು ಎಚ್ಚರಿಕೆ ನೀಡಿದ್ದಾರೆ.
ಬಾಡಿಗೆ ಮನೆಯಲ್ಲಿ ವಾಸ:ಭೀಕರ ಜಲಪ್ರಳಯದಿಂದ ಜಿಲ್ಲೆಯ ಜನ ಬೀದಿ ಪಾಲಾಗಿದ್ದರು. ಸಂತ್ರಸ್ತರ ಕಣ್ಣೀರು ಒರೆಸುವ ಉದ್ದೇಶದಿಂದ ಆಗಿನ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ನಿರಾಶ್ರಿತರಿಗೆ ನಿವೇಶನ ಕೊಡಲು ಜಿಲ್ಲೆಯಲ್ಲಿ ಜಾಗ ಗುರುತು ಮಾಡಿ ಭೂಮಿಪೂಜೆ ಮಾಡಿದ್ದರು. ಅಲ್ಲದೇ ನಿರಾಶ್ರಿತರಿಗೆ ಮನೆ ಬಾಡಿಗೆಗೆ ಹಣ ಕೂಡಾ ಕೊಟ್ಟಿದ್ದರು. ಆದರೆ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ನಿರಾಶ್ರಿತರಿಗೆ ಕೊಡುತ್ತಿದ್ದ ಬಾಡಿಗೆ ಹಣ ನಿಲ್ಲಿಸಿ ಎರಡು ಭಾಗದಲ್ಲಿ ಜನರಿಗೆ ನಿವೇಶನ ಹಂಚಿಕೆ ಮಾಡಿದೆ. ಅಲ್ಲದೇ ಮನೆ ನಿರ್ಮಾವಾಗಿದ್ದರೂ ಕೂಡ ಹಂಚಿಕೆ ಕಾರ್ಯ ಮಾಡಿಲ್ಲ. ಇದರಿಂದ ಸಂತ್ರಸ್ತರು ಬಾಡಿಗೆ ಮನೆಯಲ್ಲಿ ವಾಸ ಮಾಡುವ ಪರಿಸ್ಥಿತಿಯಿದೆ.
ಮಡಿಕೇರಿ ಸಮೀಪದ ಆರ್ಟಿಓ ಕಚೇರಿ ಸಮೀಪ ಸುಸಜ್ಜಿತ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ನಿರ್ಮಾಣವಾಗಿರೋ ಮನೆಗಳ ಹಸ್ತಾಂತರಕ್ಕೆ ಜಿಲಾಡಳಿತ ಮಿನಮೇಷ ಎಣಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಕಳೆದ ನಾಲ್ಕು ವರ್ಷದಿಂದ ಬಾಡಿಗೆ ಮನೆಯಲ್ಲೇ ವಾಸ ಮಾಡುತ್ತಿರುವುದಾಗಿ ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.