ಮಡಿಕೇರಿ: ಕೊಡಗಿನ ಶಾಲೆಯಲ್ಲಿ ಬಜರಂಗದಳ, ವಿಶ್ವ ಹಿಂದೂ ಪರಿಷತ್‌ನ ಸಂಘ ಪರಿವಾರ ಶೌರ್ಯ ಪ್ರಶಿಕ್ಷಣ ವರ್ಗ 2022 ಹೆಸರಿನಲ್ಲಿ ನಡೆದಿದೆ ಎನ್ನಲಾದ ತರಬೇತಿ ವಿವಾದದ ವಿಚಾರದಲ್ಲಿ ಕಡೆಗೂ ಶಾಲಾ ಆಡಳಿತ ಮಂಡಳಿ ಮೌನ ಮುರಿದಿದೆ. ಶಾಲೆಯಲ್ಲಿ ಶಸ್ತ್ರಾಸ್ತ್ರ ತರಬೇತಿ ನಡೆದೇ ಇಲ್ಲವೆಂದು ಶಾಲಾಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಇದರ ನಡುವೆ ಮೂವರು ವಿದ್ಯಾರ್ಥಿಗಳು ಶಾಲೆಯಿಂದ ಟಿಸಿಯನ್ನು ಪಡೆದು ಬೇರೆ ಶಾಲೆಗೆ ತೆರಳಿದ್ದಾರೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಸಾಯಿ ಶಂಕರ್ ಎಜುಕೇಶನಲ್ ಸಂಸ್ಥೆಯಲ್ಲಿ ತ್ರಿಶೂಲ ದೀಕ್ಷೆ ಹಾಗೂ ಶಸ್ತ್ರಾಸ್ತ್ರ ತರಬೇತಿ ನಡೆದಿತ್ತು ಎನ್ನುವ ಆರೋಪ ಕೇಳಿಬಂದಿತ್ತು. ಬಂದೂಕು ತರಬೇತಿ ನಡೆದಿಲ್ಲ ಅಂತ ಶಾಲೆಯ ಆಡಳಿತ ಮಂಡಳಿ ಸ್ಪಷ್ಪಡಿಸಿದೆ. ಅಲ್ಲದೇ ರಾಜಕೀಯ ವಿಚಾರಕ್ಕೆ ಶಾಲೆಯ ಹೆಸರನ್ನು ಎಳೆದು ತರದಂತೆ ಮನವಿ ಮಾಡಿದೆ. ಪ್ರಕರಣದ ಬಳಿಕ ಹೊರ ದೇಶದಿಂದ ಕರೆ ಬಂದಿದ್ದು, ಕರೆಯ ಪರಿಣಾಮ ಮೂವರು ಮುಸ್ಲಿಂ ವಿದ್ಯಾರ್ಥಿಗಳು ಶಾಲೆಯಿಂದ ಟಿಸಿ ಪಡೆದು ಹೋಗಿದ್ದಾರೆಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.