ಕೊಡಗು:ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ವಿರಾಜಪೇಟೆಯ ತೋರದಲ್ಲಿ ಬೆಟ್ಟ ಕುಸಿತದಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನು ಕಣ್ಮರೆಯಾದ 8 ಮಂದಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಬೆಟ್ಟ ಕುಸಿದು ಆ ಪ್ರದೇಶದ ಮನೆಗಳ ಮೇಲೆ ಸುಮಾರು 50 ಅಡಿಗೂ ಹೆಚ್ಚು ಎತ್ತರಕ್ಕೆ ಮಣ್ಣು ಬಿದ್ದಿದೆ. ಬೃಹತ್ ಪ್ರಮಾಣದಲ್ಲಿ ಬಿದ್ದಿರುವ ಮಣ್ಣಿನಿಂದಾಗಿ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ.
ತೋರದಲ್ಲಿ ಗುಡ್ಡ ಕುಸಿದು ತಾಯಿ-ಮಗಳು ಸಾವನ್ನಪ್ಪಿದ್ದು, ಸತ್ತವರನ್ನು ಸಂಸ್ಕಾರ ಮಾಡಲು ಹಣ ಇಲ್ಲದೆ ಕುಟುಂಬಸ್ಥರು ಪರದಾಟ ನಡೆಸುವಂತಾಗಿದೆ. ಗುಡ್ಡ ಕುಸಿದು ತಾಯಿ ಮಮತಾ ಹಾಗೂ ಪುತ್ರಿ ಲಿಖಿತಾ ಸಾವನ್ನಪ್ಪಿದ್ದು, ಇವರಿಬ್ಬರ ಶವ ಸಂಸ್ಕಾರಕ್ಕೆ ಸ್ಮಶಾನ ಕಾಯುವ ವ್ಯಕ್ತಿ ಹಣ ಡಿಮ್ಯಾಂಡ್ ಮಾಡಿದ್ದಾನೆ ಎನ್ನಲಾಗಿದೆ. ಹೀಗಾಗಿ ಎಲ್ಲವನ್ನೂ ಕಳೆದುಕೊಂಡಿರುವ ಮೃತರ ಕುಟುಂಬಸ್ಥರು ಹಣ ಇಲ್ಲದೆ ಮೃತದೇಹವಿಟ್ಟು ಕಣ್ಣೀರು ಹಾಕಿದ್ದಾರೆ.
ಕೊಡಗಿನಲ್ಲಿ ಮುಂದುವರಿದ ರಕ್ಷಣಾ ಕಾರ್ಯಾಚರಣೆ.. ಮೃತರ ಸಂಬಂಧಿಕರ ಅಸಹಾಯಕ ಸ್ಥಿತಿಯನ್ನು ವಿಡಿಯೋ ಮಾಡಿ ಸ್ಥಳೀಯರು ವೈರಲ್ ಮಾಡಿದ್ದಾರೆ. ಕಡೆಗೆ ಕೆಲ ಸಮಯದ ಬಳಿಕ, ಬೇರೆ ದಾರಿ ಇಲ್ಲದೆ ಸ್ಥಳೀಯರೇ ಶವ ಸಂಸ್ಕಾರ ನಡೆಸಿದ್ದಾರೆ. ಇಂತಹ ಸಂದರ್ಭದಲ್ಲೂ ನೆರವಿಗೆ ಬಾರದ ಸಂಸದರು ಹಾಗೂ ಶಾಸಕರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.