ಮಡಿಕೇರಿ (ಕೊಡಗು): ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಆಡುಗುಂಡಿ ಹಾಡಿ, ಜಂಗಲ್ ಹಾಡಿಗಳಿಂದ 2018ರಲ್ಲಿ ಆದಿವಾಸಿ ಜನರನ್ನು ಸ್ಥಳಾಂತರ ಮಾಡಲಾಗಿತ್ತು. ಅವರನ್ನು ಹೆಚ್ಡಿಕೋಟೆಯ ಮಾಸ್ತಿಗುಡಿ, ಹುಣಸೂರು ತಾಲೂಕಿನ ನಾಗಪುರ ಹಾಡಿಗಳ ಪುನರ್ವಸತಿ ಕೇಂದ್ರದಲ್ಲಿರಿಸಲಾಗಿತ್ತು. ಹೀಗೆ ಸ್ಥಳಾಂತರ ಮಾಡುವಾಗ ಪ್ರತಿ ಕುಟುಂಬಕ್ಕೆ ಮೂರು ಎಕರೆ ಭೂಮಿ ಕೊಡುವ ಭರವಸೆಯನ್ನು ಸರ್ಕಾರ ನೀಡಿತ್ತು.
ಆದರೆ, ಅವರಿಗೆ ಹಕ್ಕುಪತ್ರ ಮಾತ್ರ ನೀಡಲಾಗಿದೆ. ಅರಣ್ಯ ಭೂಮಿಯಂತಹ ಜಾಗವನ್ನು ತೋರಿಸಿ ಬಿಡಲಾಗಿದೆಯಷ್ಟೇ.. ಅದನ್ನು ಸಮತಟ್ಟು ಮಾಡಿಕೊಟ್ಟಿಲ್ಲ, ಭೂಮಿಗೆ ಆರ್‌ಟಿಸಿ ಕೊಟ್ಟಿಲ್ಲ. ಮೈಸೂರು ಜಿಲ್ಲೆಯಲ್ಲಿ ಕೂಲಿಯೂ ಇಲ್ಲದಿರುವುದರಿಂದ ಇವರ ಬದುಕೇ ದುಸ್ಥರವಾಗಿದೆ.
ಇದೀಗ ಹೆಚ್‌ಡಿ ಕೋಟೆ ತಾಲೂಕಿನ ಮಾಸ್ತಿಗುಡಿ ಪುನರ್ವಸತಿ ಕೇಂದ್ರವನ್ನು ಬಿಟ್ಟು ಪೊನ್ನಂಪೇಟೆ ತಾಲೂಕಿನ ಬಾಳೆಲೆ ಪಂಚಾಯತ್ ವ್ಯಾಪ್ತಿಯ ಆಡುಗುಂಡಿಗೆ ಬಂದು ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಸರ್ಕಾರ ಕೊಟ್ಟ ಭರವಸೆ ಈಡೇರಿಸುವಂತೆ ಕಳೆದ ನಾಲ್ಕು ವರ್ಷಗಳಿಂದ ಪರಿಪರಿಯಾಗಿ ಬೇಡಿಕೊಂಡಿದ್ದರೂ ಪ್ರಯೋಜನವಾಗಿಲ್ಲ.