ಮಡಿಕೇರಿ: ಭಾರಿ ಗಾತ್ರದ ಕಾಳಿಂಗ ಸರ್ಪವೊಂದು ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಬಾಳೆಲೆ ಸಮೀಪದ ಸುಳುಗೋಡು ಗ್ರಾಮದಲ್ಲಿ ಸೆರೆಯಾಗಿದೆ.
ಗ್ರಾಮದ ಜಯ ಎಂಬುವರ ತೋಟದ ತಾಳೆ ಮರದಲ್ಲಿ ಬಂದು ಸೇರಿಕೊಂಡಿದ್ದ 12 ಅಡಿ ಉದ್ದ 17 ಕೆ.ಜಿ. ತೂಕದ ಹಾವನ್ನು ಉರಗ ತಜ್ಞ ಶರತ್ ಹಾಗೂ ಅವರ ತಂಡದವರು ಕಾರ್ಯಾಚರಣೆ ನಡೆಸಿ ಸಂರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
ಭಾನುವಾರ ಸಂಜೆ 5:30 ರ ಸುಮಾರಿಗೆ ಹಾವು ಸಂಪಿಗೆ ಮರದಲ್ಲಿರುವ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ್ದ ಶರತ್ ಮತ್ತು ಅವರ ತಂಡ ಸತತ ಒಂದು ಗಂಟೆ ಕಾಲ ಪ್ರಯಾಸಪಟ್ಟು ಹಾವನ್ನು ಸೆರೆಹಿಡಿದಿದ್ದಾರೆ.
ಭಾರಿ ಗಾತ್ರದ ಕಾಳಿಂಗ ಸರ್ಪಕ್ಕೆ ನೀರು ಕುಡಿಸಿದ ಉರಗ ತಜ್ಞ ಶರತ್ ಸೆರೆಹಿಡಿದ ಅಪರೂಪದ ಹಾವನ್ನು ಇಂದು ಮಡಿಕೇರಿಯ ಗಾಂಧಿ ಮೈದಾನಕ್ಕೆ ತಂದು ಸಾರ್ವಜನಿಕವಾಗಿ ಅದನ್ನು ಪ್ರದರ್ಶಿಸಿದರು. ಈ ವೇಳೆ ಹಾವುಗಳ ಬಗ್ಗೆ ಜಾಗೃತಿ ಮೂಡಿಸಿದ ಶರತ್ ಅವರು ಕಾಳಿಂಗ ಸರ್ಪ ಅಳಿವಿನ ಅಂಚಿನಲ್ಲಿರುವ ಸರಿಸೃಪ. ಹಾವುಗಳ ಬಗ್ಗೆ ಇರುವ ಕೆಲ ತಪ್ಪು ತಿಳುವಳಿಕೆಗಳಿಂದ ಹೊರಬನ್ನಿ. ಹಾವುಗಳು ಕಂಡುಬಂದರೆ ಅವುಗಳನ್ನು ಕೊಲ್ಲಲು ಮುಂದಾಗದೇ ನಮಗೆ ಮಾಹಿತಿ ನೀಡಿದ್ರೆ ನಾವು ಹಾವನ್ನು ರಕ್ಷಿಸಿ ಕಾಡಿಗೆ ಬಿಡುತ್ತೇವೆ ಮನವಿ ಮಾಡಿದ್ರು.
ಕಳೆದ ಹಲವು ವರ್ಷಗಳಿಂದ ಹಾವುಗಳನ್ನ ರಕ್ಷಿಸುವ ಕೆಲಸ ಮಾಡುತ್ತಿರುವ ಸ್ನೇಕ್ ಶರತ್ ಈವರೆಗೆ 3ಸಾವಿರಕ್ಕೂ ಹೆಚ್ಚು ಸರಿಸೃಪಗಳನ್ನು ರಕ್ಷಿಸಿ ಕಾಡಿಗೆ ಮರಳಿಸಿದ್ದಾರೆ. ಅವರ ಈ ಕಾರ್ಯಕ್ಕೆ ಸಲಾಂ ಹೇಳಲೇಬೇಕು.