ಕೊಡಗು:ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವಕ್ಕೆ ದಿನಾಂಕ, ಸಮಯ ನಿಗದಿಯಾಗಿದೆ. ಅಕ್ಟೋಬರ್ 17ರಂದು ಸೋಮವಾರ ರಾತ್ರಿ 7:21ಕ್ಕೆ ಮೇಷ ಲಗ್ನದ ಶುಭ ಘಳಿಗೆಯಲ್ಲಿ ಪವಿತ್ರ ಕಾವೇರಿ ಮಾತೆ ತೀರ್ಥ ರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಲಿದ್ದಾಳೆ.
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಸಕಲ ಸಿದ್ಧತೆ ನಡೆಯಲಿದೆ. ತಲಕಾವೇರಿಯಲ್ಲಿ ಕಾವೇರಿ ಮಾತೆ ವಿಗ್ರಹದ ಮುಂದೆ ಸೆಪ್ಟೆಂಬರ್ 27ರ ಮಂಗಳವಾರ 11:05 ಗಂಟೆಗೆ ಪತ್ತಾಯಕ್ಕೆ ಅಕ್ಕಿ ಹಾಕುವ ಕಾರ್ಯಕ್ರಮ ಇರಲಿದೆ. ಅಕ್ಟೋಬರ್ 05ರ ಬೆಳಗ್ಗೆ 9:35ರ ಸಮಯದಲ್ಲಿ ಆಜ್ಞ ಮುಹೂರ್ತ ನೆರವೇರಲಿದೆ.
ಅಕ್ಟೋಬರ್ 15ರಂದು 11:45ಕ್ಕೆ ಅಕ್ಷಯ ಪಾತ್ರೆ ಇರಿಸುವುದು ಹಾಗೂ ಸಂಜೆ ಕಾಣಿಕೆ ಡಬ್ಬಿ ಇರಿಸುವ ಕಾರ್ಯ ನಡೆಯಲಿದೆ. ಇಂತಹ ಅಪರೂಪದ ಕ್ಷಣಗಳನ್ನು ನೋಡಲು ಸಾವಿರಾರು ಭಕ್ತರು ಬರುವ ನಿರೀಕ್ಷೆ ಇದ್ದು, ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.