ಕರ್ನಾಟಕ

karnataka

ETV Bharat / state

21 ರಂದು ಕಾವೇರಿ ನದಿ ಉತ್ಸವ; ಅಗತ್ಯ ಸಹಕಾರಕ್ಕೆ ಮನವಿ ಮಾಡಿದ ಸಚಿವರು! - ಕಾವೇರಿ ನದಿ ಸ್ವಚ್ಛತಾ ಆಂದೋಲನ

ಕಾವೇರಿ ನದಿ ಉತ್ಸವವನ್ನು ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕರಾದ ಚಂದ್ರಮೋಹನ್ ಅವರು ತಿಳಿಸಿದ್ದಾರೆ.

ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ಸಿ ನಾಗೇಶ್
ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ಸಿ ನಾಗೇಶ್

By

Published : Oct 10, 2022, 11:01 PM IST

ಕೊಡಗು: ಇದೇ ಪ್ರಥಮ ಬಾರಿಗೆ ‘ಕಾವೇರಿ ನದಿ ಉತ್ಸವ’ವನ್ನು ಅಕ್ಟೋಬರ್ 21 ರಂದು ತಾಯಿ ಕಾವೇರಿ ನದಿ ಉಗಮ ಸ್ಥಾನ ಪುಣ್ಯಕ್ಷೇತ್ರ ತಲಕಾವೇರಿ ಮತ್ತು ತ್ರಿವೇಣಿ ಸಂಗಮ ಭಾಗಮಂಡಲದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದ್ದು, ಜಿಲ್ಲಾಡಳಿತ ಅಗತ್ಯ ಸಹಕಾರ ನೀಡುವಂತೆ ಕಾವೇರಿ ನದಿ ಸ್ವಚ್ಚತಾ ಆಂದೋಲನದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ನಗರದ ಜಿ ಪಂ ಸಿಇಒ ಅವರ ಕಚೇರಿಯಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ಸಿ ನಾಗೇಶ್, ಶಾಸಕರಾದ ಎಂ. ಪಿ ಅಪ್ಪಚ್ಚುರಂಜನ್, ಕೆ.ಜಿ ಬೋಪಯ್ಯ, ಕರ್ನಾಟಕ ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ಜೀವ ವೈವಿದ್ಯ ಮಂಡಳಿ ಅಧ್ಯಕ್ಷರಾದ ನಾಪಂಡ ರವಿಕಾಳಪ್ಪ ಇತರರ ಉಪಸ್ಥಿತಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅವರು ಕೋರಿದರು.

ಸಭೆಯ ಆರಂಭದಲ್ಲಿ ಮಾತನಾಡಿದ ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕರಾದ ಚಂದ್ರಮೋಹನ್ ಅವರು, ಕಾವೇರಿ ನದಿ ಉತ್ಸವವನ್ನು ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ ಅವರನ್ನು ಆಹ್ವಾನಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಭಾಗಮಂಡಲದಲ್ಲಿ ಗಂಗಾ ಆರತಿ: ಕಳೆದ 12 ವರ್ಷಗಳಿಂದ ಜಿಲ್ಲಾ ಮಟ್ಟದಲ್ಲಿ ನದಿ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಕಾವೇರಿ ನದಿಯ ಮಹತ್ವ, ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲಾಗುತ್ತದೆ. ನದಿ ಉತ್ಸವ ಸಂದರ್ಭದಲ್ಲಿ ಭಾಗಮಂಡಲದಲ್ಲಿ ಗಂಗಾ ಆರತಿ ಹಮ್ಮಿಕೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಕಾವೇರಿ ನೀರಾವರಿ ನಿಗಮ ಅಗತ್ಯ ಸಹಕಾರ ನೀಡುವಂತೆ ಕೋರಿದರು.

ಕಾವೇರಿ ನದಿ ಮಹತ್ವ ಬಗ್ಗೆ ಜಾಗೃತಿ : ಕಾವೇರಿ ನದಿ ಸ್ವಚ್ಛತಾ ಆಂದೋಲನದ ಜಿಲ್ಲಾ ಸಂಚಾಲಕರಾದ ರೀನಾ ಪ್ರಕಾಶ್ ಅವರು ಮಾತನಾಡಿ, ತಲಕಾವೇರಿಯಿಂದ ಪಂಪ್‍ಹಾರ್ ಸುಮಾರು 800 ಕಿ. ಮೀ ವರೆಗೆ ಕಾವೇರಿ ನದಿ ಮಹತ್ವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಇದೇ ಅಕ್ಟೋಬರ್ 21 ರಂದು ನಡೆಯುವ ಕಾವೇರಿ ನದಿ ಉತ್ಸವಕ್ಕೆ ಕರ್ನಾಟಕ ಮತ್ತು ತಮಿಳುನಾಡಿನ 200 ಕ್ಕೂ ಹೆಚ್ಚು ಸ್ವಾಮೀಜಿಗಳು ಆಗಮಿಸಲಿದ್ದು, ಕಾವೇರಿ ನದಿ ಉತ್ಸವ ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸುವಂತೆ ಕೋರಿದರು.

ಕುಶಾಲನಗರದಲ್ಲಿಯೂ ಕಾರ್ಯಕ್ರಮ: ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ವೆಂಕಟೇಶ್ ಅವರು ಮಾತನಾಡಿ, ಭಾಗಮಂಡಲದಲ್ಲಿ ಆರತಿ ದೀಪೋತ್ಸವ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ಹಿನ್ನೆಲೆ ಅಗತ್ಯ ಸಹಕಾರಕ್ಕೆ ಕೋರಿದರು. ಕುಶಾಲನಗರದಲ್ಲಿಯೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ನದಿ ಉತ್ಸವ ಯಶಸ್ವಿಗೆ ಸಹಕರಿಸುವಂತೆ ಸೂಚನೆ: ಈ ಸಂದರ್ಭದಲ್ಲಿ ಮಾತನಾಡಿದ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ಸಿ ನಾಗೇಶ್, ಭಾರತೀಯರು ಪ್ರಕೃತಿಯ ಜೊತೆ ಸಾವಿರಾರು ವರ್ಷಗಳಿಂದ ಬೆರೆತು ಬದುಕುತ್ತಿದ್ದಾರೆ. ಅದನ್ನು ಉಳಿಸಿಕೊಂಡು ಹೋಗಬೇಕು. ಭಾರತೀಯ ಸಂಸ್ಕತಿಯೇ ಒಂದು ವಿಶಿಷ್ಟ. ಆ ನಿಟ್ಟಿನಲ್ಲಿ ಕಾವೇರಿ ನದಿ ಉತ್ಸವವನ್ನು ಯಶಸ್ವಿಗೊಳಿಸಲು ಎಲ್ಲರೂ ಸಹಕರಿಸುವಂತೆ ಸೂಚಿಸಿದರು.

ಶಾಸಕರಾದ ಕೆ. ಜಿ ಬೋಪಯ್ಯ ಅವರು ಮಾತನಾಡಿ, ಕಾವೇರಿ ನದಿ ಪಾತ್ರ ಹಾಗೂ ಹಾರಂಗಿ ಹಿನ್ನೀರಿನ ಪ್ರದೇಶದಲ್ಲಿ ಹೂಳು ತೆಗೆಯುವಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು. ಶಾಸಕರಾದ ಎಂ. ಪಿ ಅಪ್ಪಚ್ಚುರಂಜನ್ ಅವರು ಮುಕ್ಕೋಡ್ಲು, ಹಟ್ಟಿಹೊಳೆ ಮತ್ತಿತರ ಭಾಗದಲ್ಲಿ ಹೂಳು ತೆಗೆಯುವಂತಾಗಬೇಕು ಎಂದು ಸಲಹೆ ಮಾಡಿದರು.

ಓದಿ:ನಮ್ಮ ದೇಶದಲ್ಲಿ ಯಾವುದರಿಂದಲೂ ಧರ್ಮವನ್ನು ಹೊರಗೆ ತೆಗೆಯೋಕೆ ಆಗಲ್ಲ: ಬಿ ಎಲ್ ಸಂತೋಷ್​

ABOUT THE AUTHOR

...view details