ಮಡಿಕೇರಿ: ಕಾವೇರಿಗಾಗಿ ಇಂದು ರಾಜ್ಯಾದ್ಯಂತ ಬಂದ್ ಪ್ರತಿಭಟನೆಗಳು ನಡೆಯುತ್ತಿದ್ದರೆ ಕಾವೇರಿ ನದಿಯ ಉಗಮ ಸ್ಥಾನ ಕೊಡಗು ಜಿಲ್ಲೆಯಲ್ಲಿ ಮಾತ್ರ ಯಾವುದೇ ಬಂದ್ ಇಲ್ಲವಾಗಿದೆ. ಸಂಘ ಸಂಸ್ಥೆಗಳು ಕನ್ನಡ ಪರ ಸಂಘಟನೆಗಳು ಬಂದ್ಗೆ ಬೆಂಬಲ ನೀಡಿಲ್ಲ. ಎಂದಿನಂತೆ ಜನಜೀವನ ಆರಂಭವಾಗಿದೆ. ಜಿಲ್ಲೆಯ ಎಲ್ಲಾ ತಾಲೂಕಿಗಳಲ್ಲೂ ಕೂಡ ಕಾವೇರಿ ನೀರಿಗಾಗಿ ಪ್ರತಿಭಟನೆಗಳು ನಡೆಯುತ್ತಿಲ್ಲ. ಬೆಳಗ್ಗೆಯಿಂದಲೇ ಎಂದಿನಂತೆ ಎಲ್ಲಾ ಚಟುವಟಿಕೆಗಳು ಆರಂಭವಾಗಿವೆ.
ರಸ್ತೆಯಲ್ಲಿ ಆಟೋ ರಿಕ್ಷಾಗಳು, ಸರ್ಕಾರಿ ಬಸ್‌ಗಳು ಸಂಚಾರ ಮಾಡುತ್ತಿದ್ದು, ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರ ವಹಿವಾಟು ಎಂದಿನಂತಿದೆ. ಶಾಲಾ ಕಾಲೇಜುಗಳು ಆರಂಭವಾಗಿದ್ದು, ಯಾವುದೇ ತೊಂದರೆ ಇಲ್ಲದೆ ವಿದ್ಯಾರ್ಥಿಗಳು ಶಾಲೆಗೆ ಹೋಗುತ್ತಿದ್ದಾರೆ. ಮಡಿಕೇರಿ ನಗರದಲ್ಲಿ ಎಂದಿನಂತೆ ಜನಜೀವನ ನಡೆಯುತ್ತಿದ್ದು, ಖಾಸಗಿ ಬಸ್‌ಗಳು ಸರ್ಕಾರಿ ಕಚೇರಿಗಳು ಆರಂಭವಾಗಿವೆ.
ಉತ್ತರಕನ್ನಡದಲ್ಲಿ ಬಂದ್ಗಿಲ್ಲ ಪ್ರತಿಕ್ರಿಯೆ- ಜೋರಾದ ಮಳೆ ಆರ್ಭಟ: ಕಾವೇರಿ ನೀರಿಗಾಗಿ ಕರೆ ನೀಡಿದ್ದ ಕರ್ನಾಟಕ ಬಂದ್ಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲಾ ಕೇಂದ್ರ ಕಾರವಾರದಲ್ಲಿ ಎಂದಿನಂತೆ ಬಸ್ ಸಂಚಾರ ಆರಂಭಗೊಂಡಿದೆ. ಗ್ರಾಮೀಣ, ಜಿಲ್ಲೆ, ಅಂತರ ಜಿಲ್ಲೆಗಳಿಗೂ ಬಸ್ ಸಂಚಾರ ಶುರುವಾಗಿದ್ದು, ಬಂದ್ ಇರುವ ಕಡೆ ಮಾತ್ರ ಬಸ್ ಸಂಚಾರ ನಿಲ್ಲಿಸಲಾಗಿದೆ.
ಉತ್ತರ ಕನ್ನಡದಲ್ಲಿ ಬಂದ್ಗೆ ನೀರಸ ಪ್ರತಿಕ್ರಿಯೆ ಇನ್ನು ನಗರದಲ್ಲಿ ಅಂಗಡಿ ಮುಂಗಟ್ಟುಗಳು ಕೂಡ ನಿಧಾನವಾಗಿ ತೆರೆದುಕೊಳ್ಳುತ್ತಿವೆ. ಕೆಲ ಹೋಟೆಲ್ಗಳು ಎಂದಿನಂತೆ ಓಪನ್ ಆಗಿವೆ. ಇನ್ನು ನಗರದಲ್ಲಿ ಜನರ ಓಡಾಟವೂ ಕೂಡ ಎಂದಿನಂತೆ ಆರಂಭವಾಗಿದೆ. ಕಾರವಾರದಲ್ಲಿ ಯಾವುದೇ ರೀತಿಯ ಬಂದ್ ವಾತಾವರಣ ಕಂಡುಬಂದಿಲ್ಲ. ಆಟೋ, ಟೆಂಪೋ, ಟ್ಯಾಕ್ಸಿ ಸಂಚಾರ ಕೂಡ ಎಂದಿನಂತಿದೆ. ಇದರಿಂದ ಜಿಲ್ಲೆಯಲ್ಲಿ ಕರೆ ಕೊಟ್ಟಿರುವ ಬಂದ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇನ್ನು ಶಾಲಾ ಕಾಲೇಜುಗಳು ರಜೆ ನೀಡಿಲ್ಲ. ಈ ಕಾರಣದಿಂದಾಗಿ ವಿದ್ಯಾರ್ಥಿಗಳು ಬೆಳಗ್ಗೆಯಿಂದಲೇ ಶಾಲಾ ಕಾಲೇಜುಗಳ ಕಡೆ ತೆರಳುತ್ತಿದ್ದಾರೆ. ಇನ್ನು ಬಂದ್ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ. ಇನ್ನು ಜಿಲ್ಲೆಯ ಇತರೆ ತಾಲೂಕುಗಳಲ್ಲಿಯೂ ಇದೇ ಪರಿಸ್ಥಿತಿ ಮುಂದುವರಿದಿದೆ. ಎಲ್ಲ ತಾಲೂಕುಗಳಲ್ಲಿಯೂ ಎಂದಿನಂತೆ ಸಾರಿಗೆ ಸಂಚಾರ ಆರಂಭಗೊಂಡಿದ್ದು, ಅಂಗಡಿ ಮುಂಗಟ್ಟುಗಳನ್ನು ತೆರೆಯುತ್ತಿರುವ ಮಾಹಿತಿ ಲಭ್ಯವಾಗಿದೆ.
ಇನ್ನು ಉತ್ತರ ಕನ್ನಡ ಜಿಲ್ಲೆಯಾದ್ಯಂತ ಬೆಳಗ್ಗೆಯಿಂದಲೇ ಗಾಳಿ ಸಹಿತ ಭಾರೀ ಮಳೆ ಸುರಿಯಲಾರಂಭಿಸಿದೆ. ಕೆಲ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಕಳೆದ ನಾಲ್ಕೈದು ದಿನಗಳಿಂದ ಸಣ್ಣ ಪ್ರಮಾಣದಲ್ಲಿ ಸುರಿಯುತ್ತಿದ್ದ ಮಳೆ ಇಂದು ಜೋರಾಗಿದೆ. ಜಿಲ್ಲೆಯ ಕರಾವಳಿ ಹಾಗೂ ಮಲೆನಾಡು ತಾಲೂಕುಗಳಲ್ಲಿ ಮಳೆ ಆರ್ಭಟ ಮುಂದುವರಿದಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂದ್ ನೀರಸ: ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವ ವಿಚಾರದಲ್ಲಿ ಕನ್ನಡ ಪರ ಸಂಘಟನೆಗಳು ಮತ್ತು ರೈತ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ರಾಜ್ಯ ಬಂದ್ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಂಬಲ ವ್ಯಕ್ತವಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಎಂದಿನಂತೆ ಜನಜೀವನ ಇದೆ. ಬಸ್ಗಳ ಓಡಾಟ, ರಿಕ್ಷಾಗಳ ಸಂಚಾರ, ಮಾರುಕಟ್ಟೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವ ಸಂಘಟನೆಗಳು ಕೂಡ ಬಂದ್ಗೆ ಬೆಂಬಲಿಸಿಲ್ಲ.
ಕಾವೇರಿ ವಿಚಾರದಲ್ಲಿ ಈ ಹಿಂದೆಯೂ ನಡೆದ ಹೋರಾಟದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಬೆಂಬಲ ವ್ಯಕ್ತವಾಗಿರಲಿಲ್ಲ. ಅದೇ ರೀತಿ ಈ ಬಾರಿಯು ಕಾವೇರಿ ವಿಚಾರವಾಗಿ ಕರೆ ನೀಡಿದ ಬಂದ್ಗೆ ಬೆಂಬಲ ಸೂಚಿಸಲಾಗಿಲ್ಲ. ಕೆಎಸ್ಆರ್ಟಿಸಿ ಬಸ್, ಖಾಸಗಿ ಬಸ್ ಓಡಾಟ, ಆಟೋ ಓಡಾಟ ನಡೆಯುತ್ತಿದ್ದರೆ, ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿ, ಖಾಸಗಿ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಇನ್ನು ಅಂಗಡಿ ಮುಂಗಟ್ಟುಗಳು ತೆರೆದು ವ್ಯಾಪಾರ ವಹಿವಾಟು ನಡೆಸುತ್ತಿವೆ.
ಇದನ್ನೂ ಓದಿ:Karnataka Bandh: ಬೆಂಗಳೂರು ಏರ್ಪೋರ್ಟ್ ಮುತ್ತಿಗೆ ಯತ್ನ ... ಬಂದ್ ಹಿನ್ನೆಲೆ 41 ವಿಮಾನ ಹಾರಾಟ ರದ್ದು