ಕೊಡಗು:ಕೆಸರುಮಯವಾದ ರಸ್ತೆಯಲ್ಲಿ ಮೈನವಿರೇಳಿಸುವ ಜೀಪ್‌ಗಳು, ಶರವೇಗದಲ್ಲಿ ಗುರಿಯತ್ತ ಮುನ್ನುಗ್ಗುತ್ತಿರುವ ಸವಾರರು.. ಕಲ್ಲು-ಗುಂಡಿ, ನೀರನ್ನೂ ಲೆಕ್ಕಿಸದೆ ಸಾಗುವ ರೋಮಾಂಚನಕಾರಿ ಸ್ಪರ್ಧೆ.. ಇವೆಲ್ಲ ದೃಶ್ಯಗಳು ಕಂಡುಬಂದಿದ್ದು ಜಿಲ್ಲೆಯಲ್ಲಿ ಆಯೋಜಿಸಿದ್ದ ಆಫ್ ರೋಡ್ ಜೀಪ್ ಱಲಿಯಲ್ಲಿ.
ಕೊಡಗಿನಲ್ಲಿ ಮೈನವಿರೇಳಿಸಿದ 'ಕಕ್ಕಬ್ಬೆ ಆಫ್ ಬೀಟ್ ಡ್ರೈವ್' ಱಲಿ ಮಡಿಕೇರಿ ತಾಲೂಕಿನ ಕಕ್ಕಬ್ಬೆ ಗ್ರಾಮದಲ್ಲಿ ಆಯೋಜಿಸಿದ್ದ ರೋಮಾಂಚನಕಾರಿ ಜೀಪ್ ಱಲಿ ಆಕರ್ಷಣೆಯಿಂದ ಕೂಡಿತ್ತು. 'ಕಕ್ಕಬ್ಬೆ ಆಫ್ ಬೀಟ್ ಡ್ರೈವ್' ಹೆಸರಲ್ಲಿ ಆಯೋಜನೆಯಾಗಿದ್ದ ಜೀಪ್ ಱಲಿ ನೆರೆದಿದ್ದವರನ್ನು ರಂಜಿಸಿತ್ತು.
ಸುಮಾರು 13 ಕಿಲೋ ಮೀಟರ್ ಟ್ರ್ಯಾಕ್, ಸಾಹಸ ಪ್ರಿಯರಿಗೆ ಸಖತ್ ಥ್ರಿಲ್ಲಿಂಗ್ ಅನುಭವ ನೀಡಿತು. ಸ್ಪರ್ಧಿಗಳು ಗುರಿಯತ್ತ ವಾಹನ ಚಲಾಯಿಸಿ ಹೋಗುತ್ತಿದ್ದರೆ, ರಸ್ತೆಯನ್ನೇ ಸೀಳಿಹೊರಟ ರಾಕೆಟ್ಗಳಂತೆ ಭಾಸವಾಗುತ್ತಿತ್ತು. ಸಾಹಸಿಗರಿಗೆ ಪ್ರೋತ್ಸಾಹ ನೀಡಲು, ಕೋವಿಡ್ ಬೇಸರ ಕಳೆಯಲು, ಪರಿಸರ ಜಾಗೃತಿ ಬೆಳೆಸಲು ಆಫ್ ರೋಡ್ ಜೀಪ್ ಡ್ರೈವ್ ಆಯೋಜಿಸಲಾಗಿತ್ತು.
ರಾಜ್ಯದ ವಿವಿಧೆಡೆಯಿಂದ 80ಕ್ಕೂ ಹೆಚ್ಚು ಜೀಪ್‌ಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು. ಸವಾಲಿನ ದಾರಿಯಲ್ಲಿ ಬುದ್ಧಿವಂತಿಕೆಯಿಂದ ಮುನ್ನುಗ್ಗುವ ಸ್ಪರ್ಧಿಗಳು ಕಷ್ಟದ ಹಾದಿಯಲ್ಲಿ ಕಸರತ್ತು ನಡೆಸಿದರು. ವೃತ್ತಿಪರ ಸ್ಪರ್ಧಿಗಳ ಜೊತೆಗೆ ಹವ್ಯಾಸಿ ಸವಾರರೂ ಕೂಡ ತಮ್ಮ ಸಾಮರ್ಥ್ಯ ಪಣಕ್ಕಿಟ್ಟು ಹೋರಾಟ ನಡೆಸಿದರು.