ಕೊಡಗು: ನಿತ್ಯ 24 ಟಿಎಂಸಿ ನೀರು ಹರಿಸುವಂತೆ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದೆ. ಆದ್ರೆ ತಮಿಳುನಾಡು ಸರ್ಕಾರ ಕೇಳುವಷ್ಟು ಪ್ರಮಾಣದ ನೀರು ಹರಿಸಲು ಸಾಧ್ಯವೇ ಇಲ್ಲ ಎಂದು ಸಣ್ಣ ನೀರಾವರಿ ಹಾಗೂ ಕೊಡಗು ಉಸ್ತುವಾರಿ ಸಚಿವ ಬೋಸರಾಜ್ ಹೇಳಿದ್ದಾರೆ. 77 ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆ ಮಡಿಕೇರಿಯ ಐತಿಹಾಸಿಕ ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸಲ್ಲಿಸಿದ ನಂತರ ಅವರು ಮಾತನಾಡಿದರು.
ಮೊದಲು ನಮಗೆ ರಾಜ್ಯದ ರೈತರ ಮತ್ತು ಜನರ ಹಿತಾಸಕ್ತಿಯೇ ಮುಖ್ಯ. ರಾಜ್ಯದ ರೈತರ ಹಿತ ಬಲಿ ಕೊಡಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟ ಸಂದೇಶ ನೀಡಿದ್ದಾರೆ. ನೀರು ಬಿಡಬೇಕೋ ಬೇಡವೋ ಎಂಬುದು ಪ್ರಕೃತಿಯ ಮೇಲೆ ಆಧಾರಿತವಾಗಿರುತ್ತದೆ. ಈಗಾಗಲೇ ನಡೆಸಿರುವ ಐಸಿಸಿ ಸಭೆಯಲ್ಲಿಯೂ ರೈತರಿಗಾಗಿ ನಾಲೆಗಳಿಗೆ ನೀರು ಯಾವಾಗ ಹರಿಸಬೇಕೆಂದು ನಿರ್ಧರಿಸಲಾಗಿದೆ. ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಡಿಕೇರಿ ಶಾಸಕ ಮಂತರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ ಭಾಗಿಯಾಗಿದ್ದರು.
ಹಾವೇರಿಯಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ:ಹಾವೇರಿ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ 77 ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಗುತ್ತಿದೆ. ಹಾವೇರಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಧ್ವಜಾರೋಹಣ ನೇರವೇರಿಸಿದರು. ಮಹಾತ್ಮ ಗಾಂಧೀಜಿ ಮತ್ತು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿದರು. ನಂತರ ನಡೆದ ಪರೇಡ್ ವೀಕ್ಷಣೆ ನಡೆಸಿದ ಸಚಿವ ಶಿವಾನಂದ ತೆರೆದ ವಾಹನದಲ್ಲಿ ವಿವಿಧ ಪ್ಲಟೋನ್‌ಗಳ ವೀಕ್ಷಣೆ ನಡೆಸಿದರು.
ನಂತರ ವಿವಿಧ ಪ್ಲಟೋನಗಳು ಪಥಸಂಚಲ ನಡೆಸಿದವು. ಪೊಲೀಸ್, ಅಬಕಾರಿ ಅರಣ್ಯ ಮತ್ತು ವಿವಿಧ ಶಾಲಾ ವಿದ್ಯಾರ್ಥಿಗಳ ಪಥಸಂಚಲನ ಆಕರ್ಷಣೀಯವಾಗಿತ್ತು. ಇದೇ ಸಂದರ್ಭದಲ್ಲಿ ವಿವಿಧ ವಲಯಗಳಲ್ಲಿ ಗಣ್ಯ ಸೇವೆ ಸಲ್ಲಿಸಿದ ಗಣ್ಯರಿಗೆ ಸನ್ಮಾನಿಸುವ ಮೂಲಕ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ನಡೆಸಿಕೊಟ್ಟ ಮನರಂಜನೆ ಕಾರ್ಯಕ್ರಮಗಳು ದೇಶಭಕ್ತಿ ಸಾರಿದವು.
ಚಿಕ್ಕಮಗಳೂರಿನಲ್ಲಿ ರಂಭಾಪುರಿ ಶ್ರೀಗಳಿಂದ ಧ್ವಜಾರೋಹಣ:ರಾಷ್ಟ್ರಧ್ವಜದ ಆರೋಹಣದ ಈ ಸಂದರ್ಭ ರಾಷ್ಟ್ರದ ಐಕ್ಯತೆ ಹಾಗೂ ಸಾಮರಸ್ಯವನ್ನು ಕಾಪಾಡಿಕೊಂಡು ಹೋಗುವುದೇ ಸ್ವಾತಂತ್ರ್ಯದ ಸಂಕೇತ. ಧ್ವಜದಲ್ಲಿನ ಮೂರು ಬಣ್ಣ ಭಾವೈಕ್ಯತೆಯ ಸಂಕೇತ. ಮಧ್ಯದ ಚಕ್ರ ಅಹಿಂಸೆಯನ್ನು ತೋರುತ್ತಿದೆ. ದೇಶದ ಭದ್ರತೆ ಹಾಗೂ ಸುಭ್ರದತೆಯ ಹಿತದೃಷ್ಟಿಯಿಂದ ರಾಷ್ಟ್ರದ ಎಲ್ಲರೂ ಒಂದಾಗಿ-ಒಗ್ಗಟ್ಟಿನಿಂದ ಶ್ರಮಿಸಬೇಕಾಗಿರುವುದು ಅಗತ್ಯ ಹಾಗೂ ಅನಿವಾರ್ಯವಾಗಿದೆ ಎಂದು ರಂಭಾಪುರಿ ಶ್ರೀಗಳು ಹೇಳಿದ್ದಾರೆ.