ಕೊಡಗು: ಹಸಿರ ಹಾಸಿಗೆ ಹೊದ್ದು ಮಲಗಿರುವ ಪರ್ವತಗಳು, ಮುಗಿಲಿಗೆ ಮುತ್ತಿಡುವಂತೆ ಭಾಸವಾಗುವ ಪಶ್ಚಿಮ ಘಟ್ಟ ಪರ್ವತ ಶ್ರೇಣಿಗಳು...ಇನ್ನು ಮಳೆಗಾಲದಲ್ಲಿ ಧುಮ್ಮಿಕ್ಕಿ ಹರಿವ ಜಲಪಾತಗಳ ರಮಣೀಯ ಸೌಂದರ್ಯ ತಣಿಯಲು ಆಗಮಿಸುತ್ತಿರುವ ಪ್ರವಾಸಿಗರು.ಇವೆಲ್ಲವೂ ಕಂಡು ಬಂದಿದ್ದು ಕೊಡಗಿನ ರಮಣೀಯ ಇರ್ಫು ಜಲಪಾತದ ಬಳಿ.
ಮಂಜಿನ ನಗರಿ ಮಡಿಕೇರಿಯಲ್ಲಿ ಇರುವ ಪ್ರಮುಖ ಜಲಪಾತಗಳಲ್ಲಿ ಇರ್ಫು ಕೂಡ ಒಂದು. ಮಳೆಗಾಲದಲ್ಲಿ ಭೋರ್ಗರೆದು ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತದ ಸೌಂದರ್ಯಕ್ಕೆ ಮಾರು ಹೋಗುವ ಪ್ರವಾಸಿಗನಿಲ್ಲ. ಅದನ್ನು ಸವಿಯುವುದೇ ಕಣ್ಣಿಗೆ ಹಬ್ಬ.
ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ತನ್ನ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ವಿಸ್ತಾರವಾದ ಬೆಟ್ಟದ ಮೇಲಿಂದ ಹಾಲಿನ ನೊರೆಯ ರೂಪದಲ್ಲಿ ಧರೆಗಿಳಿಯುವ ಜಲರಾಶಿ ಕಣ್ತುಂಬಿ ಕೊಳ್ಳುವುದೇ ಒಂದು ಸೊಗಸು. ಇಲ್ಲಿಗೆ ಆಗಮಿಸುವ ಪ್ರವಾಸಿಗರು ಜಲಪಾತದ ಸೊಬಗು ನೋಡಿ ಮೈಮರೆತು ಇಲ್ಲಿಯೇ ದಿನ ಕಳೆಯುತ್ತಾರೆ. ಸೆಲ್ಫಿ ತೆಗೆದುಕೊಳ್ಳಲು ಮುಗಿ ಬೀಳುತ್ತಾರೆ. ನೀರಲ್ಲಿ ತೊಯ್ದು ಮನರಂಜನೆ ಪಡೆಯುತ್ತಾರೆ.
ಮಳೆಗಾಲ ಶುರುವಾಗುತ್ತಿದ್ದಂತೆ ಕೊಡಗಿನ ಹಲವು ಜಲಪಾತಗಳಿಗೆ ಪ್ರವಾಸ ಕೈಗೊಳ್ಳುತ್ತೇನೆ. ಅದರಲ್ಲಿ ವಿಶೇಷವಾಗಿ ಇರ್ಫು ಫಾಲ್ಸ್ ಕೂಡ. ಕೆಲಸದ ಒತ್ತಡದ ನಡುವೆ ವಾರಾಂತ್ಯದಲ್ಲಿ ಇಲ್ಲಿಗೆ ಬಂದರೆ ಮನರಂಜನೆ ಜೊತೆಗೆ ನೆಮ್ಮದಿ ಸಿಗುತ್ತೆ ಎನ್ನುತ್ತಾರೆ ಪ್ರವಾಸಿಗ ಮಹೇಶ್.
ಇದು ಕಾವೇರಿಯ ಉಪನದಿ ಲಕ್ಷ್ಮಣತೀರ್ಥ ನದಿಯಾಗಿದೆ. ಪುರಾತನ ಕಾಲದಲ್ಲಿ ಲಕ್ಷ್ಮಣ ಇಲ್ಲಿ ನೀರು ಕುಡಿದಿದ್ದ ಎಂಬ ಐತಿಹ್ಯವಿದೆ. ಬಿಟ್ಟು, ಬಿಟ್ಟು ಬರುತ್ತಿರುವ ಮುಂಗಾರಿನ ಜೊತೆಗೆ, ಚುಮು ಚುಮು ಚಳಿಯನ್ನು ಲೆಕ್ಕಿಸದೆ ಆಗಮಿಸಿ ಕ್ಷೀರಧಾರೆ ರೀತಿಯಲ್ಲಿ ಹರಿಯುವ ನೀರಿನಲ್ಲಿ ಕಾಲ ಕಳೆಯುವುದೇ ಗೊತ್ತಾಗುವುದಿಲ್ಲ ಎನ್ನುತ್ತಾರೆ ಪ್ರವಾಸಿಗ ಸಂತೋಷ್.