ಕೊಡಗು:ಅವರಿಬ್ಬರೂ ಪ್ರೀತಿಸುವಾಗ ಜಾತಿಯ ಗೋಡೆ ಅಡ್ಡಿಯಾಗಲಿಲ್ಲ. ಅಂತರ್ ಧರ್ಮಿಯ ಯುವಕ-ಯುವತಿ ಒಬ್ಬರನೊಬ್ಬರು ಪ್ರೀತಿಸಿ ವಿವಾಹವಾಗಿದ್ದರು. ಇದನ್ನು ತಿಳಿದ ಯುವತಿ ಕುಟುಂಬದವರು ಗ್ರಾಮದಲ್ಲಿರುವ ಸಮುದಾಯ ಏನಂದುಕೊಳ್ತಾರೆ ಎಂದು ಯುವತಿಯನ್ನು ಪುಸಲಾಯಿಸಿ ಮನೆಗೆ ಕರೆದುಕೊಂಡು ಹೋದ ನಂತರ ಯುವಕನಿಗೆ ನೀನು ನಮ್ಮನೆ ಅಳಿಯ ಆಗಬೇಕಾದ್ರೆ ಮತಾಂತರ ಆಗುವಂತೆ ಷರತ್ತು ಹಾಕಿದೆ.
ಪ್ರೀತಿಸಿ ಮದುವೆಯಾಗಿರುವ ಜೋಡಿ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಆಟೋ ಓಡಿಸಿಕೊಂಡಿರುವ ಸಿದ್ದಲಿಂಗಸ್ವಾಮಿ ಮೂಲತಃ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಹಲಗನಹಳ್ಳಿ ಗ್ರಾಮದ ನಿವಾಸಿ. ಇದೀಗ ಪ್ರೀತಿಸಿ ವಿವಾಹವಾಗಿ ಯುವತಿ ಮನೆಯವರು ವಿಧಿಸಿರುವ ಮತಾಂತರ ಪರೀಕ್ಷೆ ಎದುರಿಸಬೇಕಿದೆ. ಸಿದ್ಧಲಿಂಗಸ್ವಾಮಿ ಹಾಗೂ ಶಿಫಾಹಾನಿ ಏಳು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಯುವತಿ ಪೋಷಕರ ವಿರೋಧದ ನಡುವೆ ಜನವರಿ 19ರಂದು ಚಾಮರಾಜನಗರದ ಮಲೆ ಮಾದೇಶ್ವರನ ಸನ್ನಿಧಿಯಲ್ಲಿ ಜೋಡಿ ವಿವಾಹವಾಗಿದ್ದು, ಇದೀಗ ಇವರಿಗೆ ಜಾತಿಯ ಗೋಡೆ ಅಡ್ಡಿಯಾಗಿದೆ. ಮೇ28 ರಂದು ಮಗಳನ್ನು ನೋಡಲು ಬಂದಿದ್ದ ಪೋಷಕರು ಚೆನ್ನಾಗಿಯೇ ಮಾತನಾಡಿ ಮಗಳನ್ನು ರಂಜಾನ್ ಹಬ್ಬಕ್ಕೆ ಕರೆದುಕೊಂಡು ಹೋಗಿ ವಾಪಸ್ ಕಳುಹಿಸೊದಾಗಿ ಪುಸಲಾಯಿಸಿದ್ದಾರೆ. ಅದಕ್ಕೆ ಒಪ್ಪಿ ಸಿದ್ದಲಿಂಗಸ್ವಾಮಿ ಹೆಂಡತಿಯನ್ನು ಕಳುಹಿಸಿಕೊಟ್ಟಿದ್ದಾರೆ. ದಿನಗಳು ಕಳೆದಂತೆ ಆಕೆ ಫೋನ್ ಮಾಡದಿದ್ದಾಗ ನಾವು ಅವಳನ್ನು ಕಳುಹಿಸಲ್ಲ. ಅವಳು ಬೇಕಾದ್ರೆ ನೀನು ಮತಾಂತರ ಆಗಬೇಕು ಎಂದಿದ್ದು, ಯುವಕ ಇದೀಗ ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿ ಹೆಂಡತಿ ಬೇಕು ಎಂದು ದೂರು ದಾಖಲಿಸಿದ್ದಾನೆ. ಕೆಲವು ದಿನಗಳ ನಂತರ ಆಕೆಯ ಬಳಿ ಇದ್ದ ಫೋನ್ ಕಿತ್ತುಕೊಂಡಿದ್ದಾರೆ. ಒಂದು ವೇಳೆ ನೀನು ಅವನೊಟ್ಟಿಗೆ ಹೋಗುವುದಾದರೆ ನಾವೆಲ್ಲರೂ ಸಾಮೂಹಿಕವಾಗಿ ಸಾಯುತ್ತೇವೆ. ಇದಕ್ಕೆ ನೀನೇ ಹೊಣೆ ಆಗಬೇಕಾಗುತ್ತೆ. ಇಷ್ಟಕ್ಕೂ ಮೀರಿ ಆತನೊಂದಿಗೆ ಜೀವನ ನಡೆಸಬೇಕಾದರೆ ಅವನು ನಮ್ಮ ಜಾತಿಗೆ ಮತಾಂತರ ಆಗುವಂತೆ ಹೇಳಿದ್ದಾರೆ. ಅವರಿಗೆ ಪ್ರೀತಿ ಪ್ರೇಮಕ್ಕಿಂತ ಜಾತಿ ಪ್ರೇಮದ ವ್ಯಾಮೋಹವೇ ಮುಖ್ಯ ಎಂದು ಆರೋಪಿಸುತ್ತಾರೆ ಸಿದ್ದಲಿಂಗಸ್ವಾಮಿ.