ಕೊಡಗು: ಜಿಲ್ಲೆಯಲ್ಲಿ ಮಾನವ-ಕಾಡಾನೆ ಸಂಘರ್ಷ ದಿನ ದಿನಕ್ಕೆ ಹೆಚ್ಚಾಗುತ್ತಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ಮುಂದುವರಿದಿದೆ. ಕಾಡಾನೆಗಳು ಭತ್ತದ ಗದ್ದೆಗಳಲ್ಲಿ ಮನಬಂದಂತೆ ಓಡಾಡಿದ್ದು, ದಾಳಿಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿವೆ. ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂದು ರೈತರು ಕಂಗಾಲಾಗಿದ್ದಾರೆ.
ಸೋಮವಾರ ಪೇಟೆ ತಾಲ್ಲೂಕಿನ ಶನಿವಾರಸಂತೆ ಸಮೀಪದ ಕಿರಿಬಿಳಹದ ಸುನೀಲ್ ಎಂಬವರಿಗೆ ಸೇರಿದ ಭತ್ತದ ಗದ್ದೆ ಹಾಗೂ ಸುತ್ತಮುತ್ತಲಿನ ಭತ್ತ ಮತ್ತು ಕಾಫಿ ತೋಟ ನಾಶವಾಗಿದೆ. ಆಹಾರ ಅರಸಿ ನಾಡಿಗೆ ಬಂದ ಕಾಡಾನೆಗಳ ಹಿಂಡು ಗದ್ದೆ ಮಧ್ಯದಲ್ಲಿ ಓಡಾಡಿ ಪುಂಡಾಟ ಮಾಡಿದ್ದು, ಕಟಾವಿಗೆ ಬಂದಿದ್ದ ಭತ್ತದ ಬೆಳೆ ಮಣ್ಣು ಪಾಲಾಗಿದೆ.
ಸುತ್ತಮುತ್ತಲಿನ ಗ್ರಾಮದ ಕಾಫಿ ತೋಟಗಳಲ್ಲಿ 15 ದಿನಗಳಿಂದ 6 ಆನೆಗಳ ಹಿಂಡು ಬೀಡುಬಿಟ್ಟಿದ್ದು, ಮನಬಂದಂತೆ ಓಡಾಡಿ ಕಾಫಿ ಗಿಡಗಳನ್ನು ಮುರಿದಿವೆ. ಅಡಿಕೆ ಗಿಡಗಳನ್ನು ನಾಶ ಮಾಡಿವೆ. 20 ವರ್ಷಗಳಿಂದ ಬೆಳೆದಿದ್ದ ಕಾಫಿ ಗಿಡಗಳನ್ನು ಕಳೆದುಕೊಂಡು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗಜ ಪಡೆಗಳನ್ನು ನಾಡಿನಿಂದ ಕಾಡಿಗೆ ಓಡಿಸಿದರೂ ಮುಂಜಾನೆ ವೇಳೆಗೆ ರೈತರ ಬೆಳೆಗಳನ್ನು ನಾಶಪಡಿಸಿವೆ.