ವಿರಾಜಪೇಟೆ(ಕೊಡಗು) :ವಿರಾಜಪೇಟೆ ವಲಯ ಅರಣ್ಯ ವ್ಯಾಪ್ತಿಯ ಹೆಗ್ಗಳ ಕೊಟ್ಟೋಳಿ - ವಿರಾಜಪೇಟೆ ಮಾರ್ಗದಲ್ಲಿ ಸಿಹಿ ಗೆಣಸು ಸಾಗಿಸುವ ನೆಪದಲ್ಲಿ ಅಕ್ರಮವಾಗಿ ಬೀಟೆ ಮರದ ನಾಟಗಳನ್ನು ಸಾಗಿಸುತ್ತಿದ್ದ ಆರೋಪಿಗಳನ್ನು ಪತ್ತೆಹಚ್ಚಿ, ಓರ್ವನನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಆರೋಪಿಗಳು ವಾಹನದಲ್ಲಿ(ಮಹೀಂದ್ರ ಪಿಕಪ್ ಕೆಎಲ್-45–ಎ-1656) ಬೀಟೆ ಮರದ ನಾಟಗಳ ಮೇಲೆ ಪ್ಲಾಸ್ಟಿಕ್ ಚೀಲಗಳಲ್ಲಿ ಸಿಹಿ ಗೆಣಸು ತುಂಬಿಸಿ 11 ಬೀಟೆ ನಾಟಗಳು ಕಾಣದಂತೆ ಮುಚ್ಚಿ ಅಕ್ರಮವಾಗಿ ಸಾಗಿಸುತ್ತಿದ್ದರು. ಈ ಸಂದರ್ಭದಲ್ಲಿ, ವಿರಾಜಪೇಟೆ ಅರಣ್ಯ ವಲಯದ ಸಿಬ್ಬ೦ದಿ ಪತ್ತೆಹಚ್ಚಿ 5 ಲಕ್ಷ ಮೌಲ್ಯದ ಬೀಟೆ ನಾಟಗಳೊಂದಿಗೆ ಓರ್ವನನ್ನು ವಾಹನಸಹಿತ ಬಂಧಿಸಿದ್ದಾರೆ. ಆರೋಪಿಯಾದ ಬೇತು ಗ್ರಾಮದ ವಾಹನ ಚಾಲಕನಾದ ಆರೀಸ್ ಎಂ. ಎ. ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣದ ಇತರ ಆರೋಪಿಗಳಾದ ಕೊಟ್ಟಮುಡಿ- ಹೊದವಡ ಗ್ರಾಮದ ಅಬ್ಬಾಸ್ ಕೆ.ಯು. ಹಾಗೂ ನಾಪೋಕ್ಲುವಿನ ಹಳೆ ತಾಲೂಕು ಗ್ರಾಮದ ರಿಜ್ವಾನ್ ತಲೆಮರೆಸಿಕೊಂಡಿದ್ದಾರೆ.