ಮಡಿಕೇರಿ: ಕೊಡಗಿನವರ ಪ್ರಮುಖ ಹಬ್ಬಗಳಲ್ಲಿ ಒಂದಾದ ಹುತ್ತರಿ ಹೊಸ ಭತ್ತವನ್ನು ಮನೆಗೆ ತೆಗೆದುಕೊಂಡು ಹೋಗುವ ಜಾನಪದ ಹಬ್ಬ. ಮಂಜಿನ ನಗರಿಯಲ್ಲಿ ಕೊಡವ ಸಮಾಜ ಹಾಗೂ ಓಂಕಾರೇಶ್ವರ ದೇವಾಲಯದ ಸಮಿತಿ ವತಿಯಿಂದ ಹಬ್ಬವನ್ನು ಪ್ರತಿ ವರ್ಷ ಆಚರಿಸುತ್ತಾರೆ.
ಸಾಂಪ್ರದಾಯಿಕ ಉಡುಗೆ ತೊಟ್ಟು ದೇವಾಲಯದ ಅವರಣದಲ್ಲಿರುವ ಭತ್ತದ ತೆನೆಗೆ ನಮಿಸಿ, ಕೋವಿಯೊಂದಿಗೆ ಊರ ಮಂದಿಯೆಲ್ಲ ಮೆರವಣಿಗೆಯ ಮೂಲಕ ಗದ್ದೆಗೆ ತೆರಳಿ, ಅಲ್ಲಿ ಒಂದು ಸುತ್ತು ಗುಂಡು ಹಾರಿಸಿ ಕದಿರು ಕುಯ್ಯುತ್ತಾರೆ. ಪುಲಿ ಪುಲಿ ದೇವಾ ಪೊಲಿಯೇ ದೇವಾ ಎಂದು ಸಂತಸದಿಂದ ಕೂಗುತ್ತಾ ಸಾಂಪ್ರದಾಯಿಕ ಹಾಡಿನೊಂದಿಗೆ ವಾಪಸಾಗುತ್ತಾರೆ.
ಅಧಿಕೃತವಾಗಿ ಕೊಡಗಿನಾದ್ಯಂತ ಹುತ್ತರಿಗೆ ಕೊಡವರ ಕುಲದೈವ ಇಗ್ಗುತಪ್ಪನ ಸನ್ನಿಧಿಯಲ್ಲಿ ನೆರೆಕಟ್ಟುವ ಮೂಲಕ ಚಾಲನೆ ಸಿಗುತ್ತದೆ. ಐದು ಬಗೆಯ ಹಸಿರು ಮರದ ಎಲೆಗಳು, ಉಂಬಳಿ, ಹಲಸು, ಗೇರು, ಮಾವು ಸೇರಿದಂತೆ ಐದು ಬಗೆಯ ಹಸಿರೆಲೆಗಳನ್ನು ಒಟ್ಟುಗೂಡಿಸಿ ನೆರೆಕಟ್ಟಿ ದೈವಕ್ಕೆ ನಮಿಸಲಾಗುತ್ತದೆ. ಸಾಂಪ್ರದಾಯಿಕ ಉಡುಗೆಯಲ್ಲಿ ಹಬ್ಬದ ಸಂಭ್ರಮದಲ್ಲಿರುವ ಜನರು ಗದ್ದೆಯಿಂದ ತಂದ ಭತ್ತದ ಪೈರನ್ನು ಕಣದಲ್ಲಿರಿಸಿ ತಮ್ಮ ಜಾನಪದ ನೃತ್ಯಗಳ ಮೂಲಕ ಸಾಮೂಹಿಕವಾಗಿ ಕೈಯಲ್ಲಿ ಕತ್ತಿ ಹಿಡಿದು ನೃತ್ಯಮಾಡುವರು.