ಕೊಡಗಿನ ತನಲ್ ಸಂಸ್ಥೆಯಲ್ಲಿ ಒಂದಾದ ದಂಪತಿ ಕೊಡಗು: ನಾವು ಈ ಪ್ರಪಂಚಕ್ಕೆ ಒಬ್ಬಂಟಿಯಾಗಿ ಕಾಲಿಡುತ್ತೇವೆ. ಜಗತ್ತನ್ನು ಬಿಡುವಾಗಲೂ ಅಷ್ಟೇ, ಒಬ್ಬರೇ. ಆದರೆ, ಈ ಬಂದು-ಹೋಗುವುದರ ನಡುವೆ ಮದುವೆ ಮಾಡಿಕೊಂಡು ದಂಪತಿಗಳಾಗುತ್ತೇವೆ. ಮುಂದೆ ಮಕ್ಕಳನ್ನು ಪಡೆದು ಸಂಸಾರಿಗಳೂ ಆಗುತ್ತೇವೆ. ಹೀಗಾಗಿ, ಈ ಗಂಡ-ಹೆಂಡತಿಯ ನಡುವಣ ಸಂಬಂಧ ಬಹಳಷ್ಟು ವಿಶೇಷವಾಗಿರುತ್ತದೆ. ಮದುವೆಯಲ್ಲಿ ಏಳು ಹೆಜ್ಜೆಗಳನ್ನಿಟ್ಟು ಪತಿ-ಪತ್ನಿಯಾಗಿ ಏಳೇಳು ಜನ್ಮದಲ್ಲೂ ಒಂದಾಗಿ ಬಾಳೋಣವೆಂದು ಪರಸ್ಪರ ಮನದಂಗಿತ ವ್ಯಕ್ತಪಡಿಸಿಕೊಳ್ತಾರೆ.
ಹೀಗೆ ಪತಿ-ಪತಿಯ ಅನ್ಯೋನ್ಯ ಸಂಬಂಧವನ್ನು ತೋರಿಸುವ ಅಪರೂಪದ ಘಟನೆ ಕೊಡಗಿನಲ್ಲಿ ನಡೆಯಿತು. ಆಕಸ್ಮಿಕವಾಗಿ ಪತ್ನಿಯನ್ನು ಕಳೆದುಕೊಂಡಿದ್ದ ಪತಿಗೆ ಆಕೆ ಒಂಭತ್ತು ವರ್ಷಗಳ ಬಳಿಕ ಸಿಕ್ಕಿದ್ದಾರೆ. ಈ ಸಂದರ್ಭದಲ್ಲಿ ಪತಿಗಾದ ಸಂತಸಕ್ಕೆ ಪಾರವೇ ಇರಲಿಲ್ಲ. ಇದು ಅಂತಹ ಅಪೂರ್ವ ಸಂಗಮದ ಸ್ಟೋರಿ. ಬರೋಬ್ಬರಿ 9 ವರ್ಷಗಳ ಬಳಿಕ ಕೆಹರ್ ಸಿಂಗ್ ಅವರು ತಮ್ಮ ಪತ್ನಿ ದರ್ಶಿನಿಯನ್ನು ಮಡಿಕೇರಿಯ ತನಲ್ ಸಂಸ್ಥೆಯಲ್ಲಿ ಭೇಟಿಯಾಗಿದ್ದಾರೆ.
ಇವರದ್ದು ಒಂದು ಸುಂದರ ಕುಟುಂಬ. ಗಂಡ ಹಾಗೂ ಐವರು ಮಕ್ಕಳು. ದರ್ಶಿನಿ ಕೊಂಚ ಮಾನಸಿಕ ಅಸ್ವಸ್ಥರಾಗಿದ್ದರು. 2013 ರಲ್ಲಿ ಈಕೆ ದೆಹಲಿಯಿಂದ ನಾಪತ್ತೆಯಾಗಿದ್ದರು. ದರ್ಶಿನಿ ನಾಪತ್ತೆಯಾಗಿದ್ದಾಗ ಆಕೆಯ ಪತಿ ಹುಡುಕಾಡದ ಊರುಗಳಿಲ್ಲ, ವಿಚಾರಿಸದ ಸಂಬಂಧಿಕರಿರಲಿಲ್ಲ. ಆದ್ರೂ ಕೂಡ ಎಲ್ಲೂ ಪತ್ನಿಯ ಸುಳಿವೇ ಸಿಕ್ಕಿರಲಿಲ್ಲ. ಸಾಕಷ್ಟು ವರ್ಷ ಹುಡುಕಿದ ಕುಟುಂಬ ಕೊನೆಗೆ ಆಕೆ ಕೋವಿಡ್ಗೆ ಬಲಿಯಾಗಿದ್ದಾಳೆ ಎಂದುಕೊಂಡು ಹುಡುಕುವುದನ್ನೇ ನಿಲ್ಲಿಸಿಬಿಟ್ಟಿದ್ದರು.
ಅದ್ರೆ, ಅದೊಂದು ದಿನ ಬಂದ ಫೋನ್ ಕರೆ ಆಕೆ ಬದುಕಿರುವ ಸುದ್ದಿ ತಿಳಿಸಿತ್ತು. ಪತ್ನಿ ಇರುವ ಸುದ್ದಿ ತಿಳಿದ ಕೆಹರ್ ಸಿಂಗ್ 3,000 ಕಿ.ಮೀ ದೂರದ ದೆಹಲಿಯಿಂದ ಕೊಡಗಿನತ್ತ ಧಾವಿಸಿ ಬಂದು ತನ್ನ ಪತ್ನಿಯನ್ನು ನೋಡಿ ಬಿಗಿದಪ್ಪಿಕೊಂಡು ಬಾವುಕರಾದರು, ಮುದ್ದಾಡಿದರು. ಒಂಭತ್ತು ವರ್ಷಗಳ ಬಳಿಕ ಒಬ್ಬರನ್ನೊಬ್ಬರು ಭೇಟಿಯಾದ ಗಂಡ-ಹೆಂಡತಿಯ ಭಾವುಕ ಘಳಿಗೆಯನ್ನು ಪದಗಳಲ್ಲಿ ವಿವರಿಸುವುದು ಸಾಧ್ಯವಿಲ್ಲ. ಒಬ್ಬರಿಗೊಬ್ಬರು ಸಿಹಿ ತಿನ್ನಿಸುವ ಮೂಲಕವೂ ಖುಷಿಪಟ್ಟರು. 'ದೇವರು ಎಲ್ಲಿದ್ದಾನೆಂದು ಹುಡುಕುತ್ತಿದ್ದೆ. ಆದ್ರೆ, ಇಂದು ಕೊಡಗಿನ ತನಲ್ ಸಂಸ್ಥೆಯಲ್ಲಿ ನನ್ನ ದೇವರನ್ನು ಕಂಡೆ' ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ದರ್ಶಿನಿ ಕುಶಾಲನಗರದಲ್ಲಿ ಅರೆನಗ್ನ ಸ್ಥಿತಿಯಲ್ಲಿ ಇದ್ದುದನ್ನು ಕಂಡ ಪೊಲೀಸರು ಮಡಿಕೇರಿಯ ತನಲ್ ಎಂಬ ಆಶ್ರಯ ಕೇಂದ್ರಕ್ಕೆ ತಂದು ಸೇರಿಸಿದ್ದರು. ಸುಮಾರು ನಾಲ್ಕು ವರ್ಷಗಳ ಹಿಂದೆ ಈ ಸಂಸ್ಥೆ ಸೇರಿದ ಈಕೆಗೆ ಅಲ್ಲಿನ ಮಹಮದ್ ಎಂಬವರು ಆಶ್ರಯ ಕೊಟ್ಟು ಚಿಕಿತ್ಸೆ ಕೊಡಿಸುತ್ತಿದ್ದರು. ಆರು ತಿಂಗಳ ಹಿಂದೆಯಷ್ಟೇ ಈಕೆ, ನನ್ನ ಹೆಸರು ದರ್ಶಿನಿ. ಊರು ಹರಿಯಾಣ ಅಂತ ಮಾತ್ರ ಹೇಳಿದ್ದರಂತೆ. ಬಳಿಕ ಮಹಮದ್ ಅವರು ಹರಿಯಾಣ ಸೇರಿದಂತೆ ಸುತ್ತಮುತ್ತಲಿನ ಊರಿನ ಪೊಲೀಸ್ ಠಾಣೆಗಳಿಗೆ ಕರೆ ಮಾಡಿ ಕಾಣೆಯಾದವರ ಬಗ್ಗೆ ಮಾಹಿತಿ ಪಡೆದುಕೊಂಡು ಆಕೆ ಹಾಗೂ ಆಕೆಯ ಪತಿಯನ್ನು ಸಂಪರ್ಕಿಸಿದ್ದಾರೆ. ಬಳಿಕ ಪತಿ, ಪತ್ನಿಯರನ್ನು ಒಂದು ಮಾಡುವಲ್ಲಿ ಯಶಸ್ವಿಯೂ ಆಗಿದ್ದಾರೆ.