ಕರ್ನಾಟಕ

karnataka

ETV Bharat / state

ಕೊರೊನಾ ಮೃತರ ಗೌರವಯುತ ಅಂತ್ಯ ಸಂಸ್ಕಾರಕ್ಕೆ ಮುಂದಾದ ಸ್ವಯಂ ಸೇವಕರು..!

ಕೊರೊನಾದಿಂದ ಮೃತಪಟ್ಟ ವ್ಯಕ್ತಿಗಳಿಗೆ ಗೌರವಯುತವಾಗಿ ಅಂತ್ಯ ಸಂಸ್ಕಾರ ಮಾಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದ್ರೆ, ಇತ್ತ ಮೂರು ಧರ್ಮಗಳ ಸ್ವಯಂ ಸೇವಕರ ತಂಡಗಳು ಕೋವಿಡ್​ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಮುಂದೆ ಬಂದಿವೆ.

honor the funeral of the deceased from Corona
ಗೌರವಯುತ ಅಂತ್ಯ ಸಂಸ್ಕಾರಕ್ಕೆ ಮುಂದಾದ ಸ್ವಯಂ ಸೇವಕರು

By

Published : Jul 6, 2020, 9:16 PM IST

ಕೊಡಗು: ರಾಜ್ಯದಲ್ಲಿ ಕೊರೊನಾದಿಂದ ಮೃತಪಟ್ಟವರ ಅಮಾನವೀಯ ಅಂತ್ಯಸಂಸ್ಕಾರಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಎಂತಹದ್ದೇ ಸಾವಿಗೂ ಗೌರವಯುತವಾದ ಅಂತ್ಯ ಸಂಸ್ಕಾರವನ್ನು ಮಾಡಬೇಕೆಂಬ ದೃಷ್ಟಿಯಿಂದ ಕೊಡಗಿನಲ್ಲಿ ಸ್ವಯಂ ಸೇವಕರ ತಂಡಗಳು ಸಿದ್ಧವಾಗಿವೆ.

ಕೊಡಗು ಜಿಲ್ಲೆ ತನ್ನದೇ ಆದ ವಿಶೇಷ ಸಂಸ್ಕೃತಿ, ಆಚರಣೆಗಳಿಂದ ದೇಶದ ಗಮನ ಸೆಳೆದಿದೆ. ಹಾಗೆಯೇ ಕೊರೊನಾ ಡೆಡ್ಲಿ ವೈರಸ್​ನಿಂದ ಮೃತಪಟ್ಟ ವ್ಯಕ್ತಿಗಳಿಗೆ ಗೌರವಯುತವಾಗಿ ಅಂತ್ಯ ಸಂಸ್ಕಾರ ಮಾಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದ್ದರೆ, ಇತ್ತ ಮೂರು ಧರ್ಮಗಳ ಸ್ವಯಂ ಸೇವಕರ ತಂಡಗಳು ಕೋವಿಡ್​ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರಕ್ಕೆ ಮುಂದೆ ಬಂದಿವೆ. ಆ ಮೂಲಕ ಕೊಡಗಿನ ಜನತೆ ಎಲ್ಲದರಲ್ಲೂ ಸೈ ಎನ್ನುವುದನ್ನು ಮತ್ತೆ ಸಾಬೀತು ಮಾಡಲು ಹೊರಟಿದ್ದಾರೆ.

ಎಸ್‍ಡಿಪಿಐನ 30 ಯುವಕರ ತಂಡ ಜಿಲ್ಲಾಡಳಿತದಿಂದ ಈಗಾಗಲೇ ತರಬೇತಿ ಪಡೆದಿದೆ. ಹೀಗೆ ತರಬೇತಿ ಪಡೆದಿರುವ ತಂಡ ಭಾನುವಾರ ಮೃತಪಟ್ಟ ಕುಶಾಲನಗರದ 58 ವರ್ಷದ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಗೌರವಯುತವಾಗಿ ನಡೆಸಿದೆ. ಸರ್ಕಾರದ ಮಾರ್ಗಸೂಚಿಯನ್ವಯ ಎಲ್ಲವನ್ನೂ ಅನುಸರಿಸಿರುವ ತಂಡ, ಪಿಪಿಇ ಡ್ರೆಸ್​​ಗಳನ್ನು ಧರಿಸಿ ಮುಸ್ಲಿಂ ಸಂಪ್ರದಾಯದಂತೆ ನಿನ್ನೆ ಶವಸಂಸ್ಕಾರ ಮಾಡಿದೆ. ಮಡಿಕೇರಿಯ ಎಲ್ಲಾ ಜಮಾತ್​​ಗಳು ಇದಕ್ಕಾಗಿ ಮಡಿಕೇರಿಯ ರಾಣಿಪೇಟೆಯಲ್ಲಿರುವ ಖಬರಸ್ಥಾನದಲ್ಲಿ ಒಂದು ಎಕರೆಯಷ್ಟು ಜಾಗವನ್ನು ಕೋವಿಡ್-19 ವೈರಸ್​​ನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕಾಗಿಯೇ ಬಿಟ್ಟು ಕೊಟ್ಟಿವೆ.

ಕೊರೊನಾ ಮೃತರ ಗೌರವಯುತ ಅಂತ್ಯ ಸಂಸ್ಕಾರಕ್ಕೆ ಮುಂದಾದ ಸ್ವಯಂ ಸೇವಕರು

ಎಸ್‍ಡಿಪಿಐ ತಂಡ ಈಗಾಗಲೇ ತರಬೇತಿ ಪಡೆದಿದ್ದರೆ, ವಿಶ್ವ ಹಿಂದೂ ಪರಿಷತ್, ಭಜರಂಗದಳದ 45 ಯುವಕರ ತಂಡವೂ ಕೋವಿಡ್-19ನಿಂದ ಮೃತಪಟ್ಟವರನ್ನು, ನಾವೂ ಹಿಂದೂ ಸಂಪ್ರದಾಯದಂತೆ ಶವಸಂಸ್ಕಾರ ಮಾಡಲು ರೆಡಿ ಇದ್ದೇವೆ. ನಮಗೂ ತರಬೇತಿ ನೀಡಿ ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿವೆ. ಇನ್ನು ಸೇವಾ ಭಾರತಿಯಿಂದಲೂ ಸ್ವಯಂ ಸೇವಕರ ತಂಡವು ಕೊರೊನಾಕ್ಕೆ ಬಲಿಯಾಗುವವರ ಶವಸಂಸ್ಕಾರ ಮಾಡುವುದಕ್ಕೆ ಮುಂದೆ ಬಂದಿದೆ.

ಜೊತೆಗೆ ಕ್ರಿಶ್ಚಿಯನ್ ಸಮುದಾಯದ ಸ್ವಯಂ ಸೇವಕರು ಕೂಡ ತಮ್ಮ ಸಂಪ್ರದಾಯದಂತೆ ಗೌರವಯುತವಾಗಿ ಅಂತ್ಯ ಸಂಸ್ಕಾರ ಮಾಡುತ್ತೇವೆ. ಹೀಗಾಗಿ ನಮಗೂ ತರಬೇತಿ ಬೇಕು ಎಂದು ಮುಂದೆ ಬಂದಿದ್ದಾರೆ. ಆ ಮೂಲಕ ಕೊರೊನಾದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ಗೌರವದಿಂದ ಮಾಡಿ ಮೃತರ ಆತ್ಮಗಳಿಗೆ ನೆಮ್ಮದಿ ದೊರಕಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಇನ್ನು ಜಿಲ್ಲಾಡಳಿತ ಕೂಡ ತರಬೇತಿ ನೀಡಿದೆ. ಸಂಸ್ಕಾರ ಮಾಡಲು ಸಿಬ್ಬಂದಿ ಕೊರತೆ ಇಲ್ಲ. ಆದರೆ ಸಮುದಾಯದವರು ಮುಂದೆ ಬಂದಾಗ ಸಂಸ್ಕಾರಕ್ಕೊಂದು ಅರ್ಥ ಸಿಗುತ್ತದೆ. ಹೀಗಾಗಿ ತರಬೇತಿ ನೀಡಿದ್ದೇವೆ ಎನ್ನುತ್ತಾರೆ ಜಿಲ್ಲಾಧಿಕಾರಿ. ಅಲ್ಲದೆ ಜಿಲ್ಲೆಯ ಮೂರು ತಾಲೂಕುಗಳಲ್ಲೂ ಶವ ಸಂಸ್ಕಾರಕ್ಕೆ ಜಾಗ ಮೀಸಲಿರಿಸಲಾಗಿದೆ ಎಂದಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೊರೊನಾದಿಂದ ಮೃತಪಟ್ಟರೆ ಅಂತ್ಯ ಸಂಸ್ಕಾರಕ್ಕೆ ಗೌರವವೇ ಇಲ್ಲದಂತೆ ನಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ, ಸ್ವಯಂ ಸೇವಕರ ತಂಡಗಳು ಅಂತ್ಯ ಸಂಸ್ಕಾರವನ್ನು ಗೌರವದಿಂದ ನೆರವೇರಿಸುವುದಕ್ಕೆ ಮುಂದೆ ಬಂದಿರುವುದು ನಿಜಕೂ ಶ್ಲಾಘನೀಯ.

ABOUT THE AUTHOR

...view details