ಕೊಡಗು: ಲಕ್ಷಾಂತರ ರೂಪಾಯಿ ಹಣ ದೋಚಿದ್ದ ಹನಿಟ್ರ್ಯಾಪ್ ಗ್ಯಾಂಗ್ವೊಂದರ ಆರು ಮಂದಿಯನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸ್ ಕಾರ್ಯಾಚರಣೆ ತಂಡ ಯಶಸ್ವಿಯಾಗಿದೆ.
ದುಬೈನಲ್ಲಿ ನೆಲೆಸಿದ್ದ ಎಮ್ಮೆಮಾಡು ನಿವಾಸಿ ಗಫೂರ್ ಎಂಬಾತನೇ ಜಾಲದ ಮೋಸಕ್ಕೆ ಒಳಗಾದವರು. ಪ್ರಕರಣದಲ್ಲಿ ಶಾಮೀಲಾಗಿದ್ದ ಎಮ್ಮೆಮಾಡುವಿನ ಅಜರುದ್ದೀನ್ (24), ಅಬುಬಕರ್ ಸಿದ್ದಿಕ್ (33), ಹಸೇನಾರ್ (27), ಇರ್ಷಾದ್ (27), ಇರ್ಷಾದ್ ಅಲಿ (27) ಮತ್ತು ಸಮೀರ್ (28) ಬಂಧನಕ್ಕೊಳಗಾದವರು. ಇನ್ನು ಪ್ರಕರಣ ಸಂಬಂಧ ಮಡಿಕೇರಿ ಮಹಿಳಾ ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿನಿಯನ್ನು ಕೂಡ ಬಂಧಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಆಗಸ್ಟ್ 16 ರಂದು ಈ ಘಟನೆ ನಡೆದಿದೆ. ದೂರುದಾರ ಗಫೂರ್ ದುಬೈನಿಂದ ಎಮ್ಮೆಮಾಡುವಿಗೆ ಮನೆ ಕಟ್ಟುವ ಉದ್ದೇಶದಿಂದ ಆಗಮಿಸಿದ್ದರು. ಮನೆ ನಿರ್ಮಾಣಕ್ಕೆಂದು ಲಕ್ಷಾಂತರ ರೂಪಾಯಿ ಹಣವನ್ನು ತಂದಿದ್ದ ಇವರ ಮೇಲೆ ಅದೇ ಗ್ರಾಮದ ಕರೀಂ ಮತ್ತು ಗ್ಯಾಂಗ್ ಕಣ್ಣಿಟ್ಟು ಸಂಚು ರೂಪಿಸಿದ್ದರಂತೆ. ಮೈಸೂರಿಗೆ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಗೆಂದು ಗಪೂರ್ ಅವರನ್ನು ಕರೆದೊಯ್ದು ಹೋಂ ಸ್ಟೇಯೊಂದರಲ್ಲಿ ರೂಂ ಬುಕ್ ಮಾಡಿ ಸಂಚು ರೂಪಿಸಿದ್ದರು ಎನ್ನಲಾಗಿದೆ.
ನಂತರ ಗಫೂರ್ಗೆ ಅಮಲು ಪದಾರ್ಥ ನೀಡಿ ಯುವತಿಯ ಜೊತೆಗಿನ ಅಶ್ಲೀಲ ಫೋಟೋಗಳನ್ನು ತೆಗೆದಿದ್ದಲ್ಲದೇ ದೈಹಿಕ ಹಲ್ಲೆ ನಡೆಸಿ ಬೆದರಿಸಿದ್ದರಂತೆ. 60 ಸಾವಿರ ರೂ. ಹಣ ಹಾಗೂ 50 ಸಾವಿರ ದುಬೈನ ದಿರಾಮ್ ಕರೆನ್ಸಿ ದೋಚಿ, 50 ಲಕ್ಷ ಹಣ ನೀಡು ಇಲ್ಲದಿದ್ದರೆ ಫೋಟೋ, ವಿಡಿಯೋವನ್ನು ಮಾಧ್ಯಮದಲ್ಲಿ ಪ್ರಸಾರ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು ಎಂದು ತಿಳಿದುಬಂದಿದೆ. ನಂತರ ಗಫೂರ್ ಮನೆಯಿಂದ 3.80 ಲಕ್ಷ ಹಣ ತರಿಸಿಕೊಂಡು ಆರೋಪಿಗಳಿಗೆ ಕೊಟ್ಟಿದ್ದರಂತೆ. ಬಳಿಕ ಈ ಬಗ್ಗೆ ನಾಪೋಕ್ಲು ಪೊಲೀಸ್ ಠಾಣೆಗೆ ಗಫೂರ್ ದೂರು ನೀಡಿದ್ದರು.