ಮಡಿಕೇರಿ(ಕೊಡಗು):ನಾಡಿನ ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ನಾಳೆ(ಅ.17) ರಾತ್ರಿ 7 ಗಂಟೆ 21 ನಿಮಿಷಕ್ಕೆ ಪವಿತ್ರ ತೀರ್ಥೋದ್ಭವ ಜರುಗಲಿದೆ. ಪವಿತ್ರ ತೀರ್ಥೋದ್ಭವ ಯಶಸ್ಸಿಗೆ ಪ್ರತಿಯೊಬ್ಬರೂ ಸಹಕರಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಅವರು ಕೋರಿದ್ದಾರೆ.
ಭಾಗಮಂಡಲದ ಮುಡಿಶೆಡ್ ಕಟ್ಟಡದಲ್ಲಿ ಮಂಗಳವಾರ ನಡೆದ ಪವಿತ್ರ ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಜಾತ್ರಾ ಮಹೋತ್ಸವ ಸಂಬಂಧ ವಿವಿಧ ಇಲಾಖೆಗಳು ಕೈಗೊಂಡಿರುವ ಅಗತ್ಯ ಸಿದ್ಧತೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಲಹೆ, ಸೂಚನೆ, ಅಭಿಪ್ರಾಯ ಪಡೆದು ಅವರು ಮಾತನಾಡಿದರು.
ಪೂಜಾ ಪದ್ಧತಿಯಲ್ಲಿ ಬದಲಾವಣೆಯಿಲ್ಲ:ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಆಗಮಿಸುವ ಭಕ್ತಾದಿಗಳಿಗೆ ಅಗತ್ಯ ಭದ್ರತೆ ಹಾಗೂ ಸೂಕ್ತ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಲಾಗುವುದು. ಭಕ್ತಾದಿಗಳ ಭಾವನೆಗಳನ್ನು ಅರ್ಥ ಮಾಡಿಕೊಂಡು ತೀರ್ಥೋದ್ಭವ ಸಂದರ್ಭದಲ್ಲಿ ಬೇಕಾದ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು. ಗುಂಡಿ ಬಿದ್ದಿರುವ ರಸ್ತೆಗಳನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. ಪೂಜಾ ಪದ್ಧತಿಯಲ್ಲಿ ಯಾವುದೇ ಗೊಂದಲವಿಲ್ಲದೆ ಈ ಹಿಂದೆ ಆಚರಿಸಿಕೊಂಡು ಬಂದ ರೀತಿಯಲ್ಲಿ ಈ ಬಾರಿಯೂ ನಡೆಸಿಕೊಂಡು ಹೋಗಲಾಗುತ್ತದೆ ಎಂದು ಅವರು ಹೇಳಿದರು.
ಅಗತ್ಯ ಮುನ್ನೆಚ್ಚರಿಕೆ:ಉಪ ಪೊಲೀಸ್ ವರಿಷ್ಠಾಧಿಕಾರಿ ಗಜೇಂದ್ರ ಪ್ರಸಾದ್ ಮಾತನಾಡಿ, ಸಂಚಾರ ವ್ಯವಸ್ಥೆಗೆ ಯಾವುದೇ ರೀತಿ ಅಡಚಣೆಯಾಗದ ರೀತಿಯಲ್ಲಿ ಸೂಕ್ತ ಕ್ರಮ ವಹಿಸಲಾಗುವುದು. ವಾಹನ ನಿಲುಗಡೆ ಹಾಗೂ ಕುಂಡಿಕೆಯ ಸುತ್ತಮುತ್ತಲು ಮುಂಜಾಗ್ರತೆ ಕ್ರಮ ವಹಿಸಲಾಗುವುದು. ಕಳೆದ ಎರಡು ವರ್ಷ ಭಕ್ತಾದಿಗಳ ಸಂಖ್ಯೆ ಕೊಂಚ ಕಡಿಮೆ ಇತ್ತು. ಆದರೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ ಇರುವುದರಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ತಲಕಾವೇರಿ ಪವಿತ್ರ ತೀರ್ಥೋದ್ಭವ ಸಂಬಂಧ ಪೊಲೀಸ್ ಇಲಾಖೆಯಿಂದ ಮೂವರು ಡಿವೈಎಸ್‍ಪಿಗಳು, 7 ಮಂದಿ ಇನ್ಸ್ಪೆಕ್ಟರ್, 17 ಮಂದಿ ಸಬ್ ಇನ್ಸ್ಪೆಕ್ಟರ್, 300 ಮಂದಿ ಪೊಲೀಸರು ಹಾಗೂ 100 ಮಂದಿ ಮೀಸಲು ಪೊಲೀಸ್ ಸಶಸ್ತ್ರ ಪಡೆಯನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚಯ್ಯ ಮಾತನಾಡಿ, ಸ್ಥಳೀಯ ಜನರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಮುಂದೆ ಹೇಳಿಕೊಂಡಿದ್ದಾರೆ. ಆ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಅವರ ಸಮಸ್ಯೆಗಳಿಗೆ ಸ್ಪಂದಿಸುವಂತಾಗಬೇಕು. ಪುರಾತನ ಕಾಲದಿಂದ ನಡೆದುಕೊಂಡು ಬರುತ್ತಿರುವ ಆಚಾರ-ವಿಚಾರ, ಸಂಪ್ರದಾಯಗಳನ್ನು ಮುಂದೆಯೂ ನಡೆಸಿಕೊಂಡು ಹೋಗಬೇಕು. ಜನರ ಭಕ್ತಿ ಭಾವನೆಗಳನ್ನು ಅರಿತು ಅದನ್ನು ಗೌರವಿಸುವಂತಾಗಬೇಕು. ಆ ನಿಟ್ಟಿನಲ್ಲಿ ಪವಿತ್ರ ಕುಂಡಿಕೆಯಲ್ಲಿ ತೀರ್ಥಸ್ನಾನ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.