ಕರ್ನಾಟಕ

karnataka

ETV Bharat / state

ವಿಶ್ವದ ಅತಿ ದೊಡ್ಡ ಬುದ್ಧನ ಚಿತ್ರ ಪರದೆ ಹಾರಿಸಿ ಟಿಬೆಟಿಯನ್ ಹೊಸ ವರ್ಷಾಚರಣೆ - Holi Celebration in Tibetan Camp

ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ಟಿಬೆಟಿಯನ್ ಹೊಸ ವರ್ಷವನ್ನು ಅದ್ದೂರಿಯಾಗಿ ಆಚರಿಸಲಾಗಿದೆ.

Holi Celebration in Tibetan Camp
ಟಿಬೆಟಿಯನ್ ಕ್ಯಾಂಪ್​​ನಲ್ಲಿ ಹೋಳಿ ಸಂಭ್ರಮ

By

Published : Mar 18, 2022, 7:30 PM IST

ಕೊಡಗು:ಜಿಲ್ಲೆಯ ಕುಶಾಲನಗರ ಸಮೀಪದ ಟಿಬೆಟಿಯನ್ ಕ್ಯಾಂಪ್​​ನಲ್ಲಿ ಇಂದು ಹೋಳಿ ಹುಣ್ಣಿಮೆಯ ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಲಾಯಿತು.


ಮುಂಜಾನೆಯ ಹೊತ್ತು, ಪ್ರಶಾಂತ ವಾತಾವರಣದ ನಡುವೆ ಮಂತ್ರ ಪಠಣ ಸದ್ದು, ಧಾರ್ಮಿಕ ಉಡುಗೆ ತೊಟ್ಟ ಬೌದ್ಧ ಭಿಕ್ಕುಗಳು, 7 ಅಂತಸ್ತಿನ ಟವರ್ ಮೇಲೆ ಬುದ್ದನ ಬೃಹತ್​​ ಚಿತ್ರ ಪರದೆ (ಟಂಕ) ಹಾರಿಸಿ ಭಕ್ತಿಯಿಂದ ನಮಸ್ಕರಿಸಿದರು.


ಟಿಬೆಟಿಯನ್ನರಿಗೆ ಇಂದಿನಿಂದ ಹೊಸ ವರ್ಷ ಆರಂಭವಾಗಿದೆ. 15 ದಿನಗಳ ಕಾಲ ಟಿಬೆಟಿಯನ್ ಹೊಸ ವರ್ಷದ ಸಂಭ್ರಮ ಸಡಗರ ಜೋರಾಗಿಯೇ ನಡೆಯುತ್ತದೆ. ವರ್ಷದ ಮೊದಲ ದಿನದಲ್ಲಿ ವಿಶ್ವದಲ್ಲಿಯೇ ಅತೀ ದೊಡ್ಡ ಬುದ್ದನ ಇನ್ನೊಂದು ಅವತಾರ (ಪದ್ಮ ಸಂಭಾವ) ಇರುವ ಟಂಕ (ಬಾವುಟ) ಹಾರಿಸಿ ಹೋಮ,ಪೂಜೆ ಮಾಡಿ ಟಿಬೆಟಿಯನ್​​ರು ಹೊಸ ವರ್ಷಾಚರಣೆ ಮಾಡುತ್ತಾರೆ.

ಆಯಸ್ಸು ಹೆಚ್ಚಾಗುತ್ತದೆ ಎಂಬ ನಂಬಿಕೆ:ದೇಶ ವಿದೇಶಗಳಿಂದ ಬಂದಿರುವ ಸಾವಿರಾರು ಬೌದ್ಧ ಭಿಕ್ಷುಗಳು ಮತ್ತು ಭಕ್ತರು ಈ ವರ್ಷಾಚರಣೆಗೆ ಸಾಕ್ಷಿಯಾದರು. ಬುದ್ಧನ ಬೃಹತ್​​ ಚಿತ್ರ ಪರದೆ (ಬಾವುಟ) ನೋಡಿದರೆ ಒಳ್ಳೆಯದಾಗುತ್ತದೆ, ಆಯಸ್ಸು ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ. ಈ ಕಾರಣಕ್ಕೆ ಎಲ್ಲಾ ಭಾಗದಿಂದಲೂ ಜನರು ಕುಶಾಲ ನಗರ ಟಿಬೆಟಿಯನ್ ಕ್ಯಾಂಪ್​ಗೆ ಬರುತ್ತಾರೆ. ರಾತ್ರಿಯಿಡೀ ದೇಶಕ್ಕೆ ಹಾಗೂ ಎಲ್ಲಾ ಜನರಿಗೆ ಒಳ್ಳೆಯದಾಗಲಿ ಎಂದು ಹೋಮ‌-ಹವನ ಮಾಡಿ ಪೂಜೆ ಸಲ್ಲಿಸುತ್ತಾರೆ.


ಮುಂಜಾನೆ 7 ಗಂಟೆಗೆ ಆರಂಭವಾಗಿ ಅರ್ಧ ಗಂಟೆಯಲ್ಲಿ 7 ಅಂತಸ್ತಿನ ಟವರ್ ಮೇಲೆ ಬಾವುಟ ಹಾರಿಸಿ ಎಲ್ಲರೂ ನಮಸ್ಕರಿಸಿ ಪೂಜೆ ಸಲ್ಲಿಸುತ್ತಾರೆ. 20 ನಿಮಿಷದ ಬಳಿಕ ಕೆಳಗಿಳಿಸಿ ಬಾವುಟವನ್ನು ಹೊತ್ತು‌ ಮೆರವಣೆಗೆ ಮಾಡುತ್ತಾರೆ. ನಂತರ ಇಡೀ ದಿನ ನೃತ್ಯ ‌ಮಾಡಿ ಸಂಭ್ರಮಿಸುತ್ತಾರೆ.

ಹೊಸ ವರ್ಷಕ್ಕೂ ಮುನ್ನ ಗೂತುರ್:ಟಿಬೆಟಿಯನ್ನರು ಹೊಸ ವರ್ಷವನ್ನು ಸ್ವಾಗತಿಸುವ ಮುನ್ನ ಗೂತೂರ್ (ವಿಶೇಷ ಪೂಜೆ)ಹೆಸರಿನ ಆಚರಣೆ ನಡೆಸುವ ಸಂಪ್ರದಾಯವಿದೆ. ಗೂತೂರ್ ಆಚರಣೆಯ ಮೂಲಕ ದುಷ್ಟ ಶಕ್ತಿಗಳನ್ನು ನಿಗ್ರಹಿಸಲಾಗುತ್ತದೆ. ಇದಕ್ಕಾಗಿ ಬೌದ್ದ ಸನ್ಯಾಸಿಗಳಿಂದ ದಿನವಿಡೀ ಪ್ರಾರ್ಥನೆ ಸಲ್ಲಿಸುತ್ತಾರೆ.


ಟಿಬೆಟ್‍ನಿಂದ ವಲಸೆ ಬಂದಿರುವ ಜನಗಳಿಗೆ ಭಾರತ ಆಶ್ರಯ ನೀಡಿದೆ. ಶಾಂತಿಪ್ರಿಯರಾದ ಟಿಬೆಟ್ ಜನರು ತಮ್ಮ ಧರ್ಮದ ಮಾರ್ಗದರ್ಶನದಲ್ಲಿಯೇ ಜೀವಿಸುತ್ತಾರೆ. ಪ್ರತಿ ವರ್ಷದ ಈ ವಿಶೇಷ ಆಚರಣೆಗೆ ಕಳೆದ ಎರಡು ವರ್ಷಗಳಿಂದ ಬ್ರೇಕ್ ಬಿದ್ದಿತ್ತು. ಕೊರೊನಾ ಮಹಾಮಾರಿಯ ಭೀತಿಯಿಂದಾಗಿ ಸರ್ಕಾರ ಎಲ್ಲಾ ಧಾರ್ಮಿಕ ಆಚರಣೆಗಳಿಗೂ ಬ್ರೇಕ್ ಹಾಕಿತ್ತು. ಹಾಗಾಗಿ ಟಿಬೆಟಿಯನ್​​ರೂ ಕೂಡ ಕಳೆದ ಎರಡು ವರ್ಷಗಳಿಂದ ಹೊಸ ವರ್ಷದ ಆಚರಣೆಯನ್ನು ಕೈ ಬಿಟ್ಟಿದ್ದರು.


ಅಲ್ಲದೇ ಈ ಹೊಸ ವರ್ಷದ ಆಚರಣೆಯ ಹಣವನ್ನು ಕೊರೊನಾ ಸಂಕಷ್ಟಕ್ಕೆ ಸಿಲುಕಿದ್ದ ಜನರಿಗೆ ಕಿಟ್ ವಿತರಿಸಲು ಬಳಸಿ ಮಾನವೀಯತೆ ಮೆರೆದಿದ್ದರು. ಇದೀಗ ಕೊರೊನಾ ಸಂಕಷ್ಟ ಕಾಲ ದೂರವಾದ ಕಾರಣ ಅದ್ಧೂರಿಯಾಗಿ ಟಿಬೆಟಿಯನ್ನರು ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ.

ABOUT THE AUTHOR

...view details