ಮಡಿಕೇರಿ:ಇಲ್ಲಿನ ದಸರಾ ಆಚರಣೆ ಇಂದು ನಿನ್ನೆಯದಲ್ಲ. ಇದಕ್ಕೆ ಗತಕಾಲದ ಇತಿಹಾಸವಿದೆ. ಶಿವಮೊಗ್ಗದ ಇಕ್ಕೇರಿಯಿಂದ ಕೊಡಗಿನ ಹಾಲೇರಿಗೆ ಬಂದು ನೆಲೆಸಿ, ಆ ನಂತರ ಅರಸೊತ್ತಿಗೆಯನ್ನು ಸ್ಥಾಪಿಸಿ ಕೊಡಗನ್ನಾಳಿದ ಹಾಲೇರಿ ವಂಶಸ್ಥರು ವಿಜಯದಶಮಿ ಆಚರಣೆಯನ್ನು ಮಾಡುತ್ತಿದ್ದರು ಎನ್ನಲಾಗ್ತಿದೆ.
1781ರಿಂದ 1809ರವರೆಗೆ ಕೊಡಗನ್ನಾಳಿದ ದೊಡ್ಡವೀರ ರಾಜೇಂದ್ರ ಒಡೆಯ ಮೈಸೂರು ಮಹಾರಾಜರು ನಡೆಸುತ್ತಿದ್ದಂತೆ ಆಯುಧ ಪೂಜೆ, ಶ್ರೀದೇವಿಯ ಆರಾಧನೆ ಸೇರಿದಂತೆ ನವರಾತ್ರಿಯ ಉತ್ಸವವನ್ನು ಆಚರಿಸುತ್ತಿದ್ದರು ಎಂಬುದು ಇತಿಹಾಸ.
ಮಹಾಗಣಪತಿಗೆ ಮೊದಲ ಪೂಜೆ:ಆಗಿನ ಕಾಲದಲ್ಲಿ ಪಾಡ್ಯದ ಪ್ರಾತಃಕಾಲದಲ್ಲಿ ಏಳುತ್ತಿದ್ದ ಮಹಾರಾಜರು ಮಂಗಳಸ್ನಾನ ಮಾಡಿ ನವರಾತ್ರಿ ಉತ್ಸವಕ್ಕೆ ಸಂಕಲ್ಪ ತೊಡುತ್ತಿದ್ದರು. ಆ ನಂತರ ಕೋಟೆಯಲ್ಲಿರುವ ಮಹಾಗಣಪತಿಗೆ ಮೊದಲ ಪೂಜೆ ನೆರವೇರಿಸುವ ಮೂಲಕ ನವರಾತ್ರಿಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿತ್ತು. ನವರಾತ್ರಿ ಕಾರ್ಯಕ್ರಮಗಳೆಲ್ಲವೂ ಅರಮನೆಯ ಆವರಣದಲ್ಲಿಯೇ ನಡೆಯುತ್ತಿತ್ತು. ನವರಾತ್ರಿ ಉತ್ಸವದಲ್ಲಿ ವಿಶೇಷ ರಾಜರ ದರ್ಬಾರ್, ಕುದುರೆ ಹಾಗೂ ಜಂಬೂಸವಾರಿಯೂ ನಡೆಯುತ್ತಿತ್ತಲ್ಲದೆ, ಕೊಡವರ ಸಂಸ್ಕೃತಿ, ಆಚಾರ, ವಿಚಾರಗಳನ್ನು ಬಿಂಬಿಸುವಂತಹ ಕಾರ್ಯಕ್ರಮಗಳು ಹಗಲು ಹೊತ್ತಿನಲ್ಲಿ ನಡೆಯುತ್ತಿದ್ದವು.
ಬನ್ನಿ ಕಡಿಯುವುದರೊಂದಿಗೆ ದಸರಾ ಆಚರಣೆಗೆ ತೆರೆ:ಅಂದು ಮೈಸೂರಿನಲ್ಲಿ ನಡೆಯುವಂತೆ ಜಂಬೂ ಸವಾರಿಯೂ ನಡೆಯುತ್ತಿತ್ತು. ಮಡಿಕೇರಿಯ ಅರಮನೆ ಆವರಣದಿಂದ ಮೆರವಣಿಗೆ ಆರಂಭವಾಗುತ್ತಿತ್ತು. ಒಂದು ಕಡೆ ದೇವರ ವಿಗ್ರಹವನ್ನು ಹೊತ್ತ ಅಂಬಾರಿ ಆನೆ, ಮತ್ತೊಂದು ಕಡೆ ಮಹಾರಾಜರನ್ನು ಹೊತ್ತ ಆನೆ– ಹೀಗೆ ಎರಡು ಆನೆಗಳು ಮುನ್ನಡೆದರೆ ಸುತ್ತಲೂ ಸಿಂಗಾರಗೊಂಡ ಆನೆಗಳು, ಕುದುರೆಗಳು, ಸೇನಾಧಿಪತಿಗಳು, ಸೈನಿಕರು ಹಾಗೂ ಕೊಡವರು ಸಾಂಪ್ರದಾಯಿಕ ಉಡುಪಿನಲ್ಲಿ ನೃತ್ಯ ಮಾಡುತ್ತ ಮೆರವಣಿಗೆಯಲ್ಲಿ ಸಾಗುತ್ತಿದ್ದರಂತೆ. ಪ್ರಮುಖ ಬೀದಿಗಳಲ್ಲಿ ಸಾಗುತ್ತಿದ್ದ ಮೆರವಣಿಗೆ ಮಹದೇವಪೇಟೆ ಬಳಿಯ ಬನ್ನಿ ಮಂಟಪದಲ್ಲಿ ಬನ್ನಿ ಕಡಿಯುವುದರೊಂದಿಗೆ ಮುಕ್ತಾಯಗೊಳ್ಳುತ್ತಿತ್ತು.
ಬಿದಿರಿನ ಅಟ್ಟಣಿಗೆಯಿಂದ ಮಂಟಪವನ್ನು ರಚಿಸಿ ಅದರಲ್ಲಿ ಉತ್ಸವ ಮೂರ್ತಿಯನ್ನು ಇಡಲಾಗುತ್ತಿತ್ತು. ಈ ಉತ್ಸವ ಮೂರ್ತಿಗೆ ಕನ್ಯೆಯರು ಚೌರಿಗೆಯನ್ನು ಬೀಸುತ್ತಿದ್ದರೆ, ಪುರುಷರು ಮಂಟಪವನ್ನು ಹೊತ್ತು ಮೆರವಣಿಗೆಯಲ್ಲಿ ಸಾಗುತ್ತಿದ್ದರು. ದಾರಿಯುದ್ದಕ್ಕೂ ಪೂಜೆಗಳು ನಡೆಯುತ್ತಿದ್ದವು. ಕೊಡವ ಸಾಂಪ್ರದಾಯಿಕ ವಾಲಗ, ನೃತ್ಯಗಳೊಂದಿಗೆ ಮೆರವಣಿಗೆ ಸಾಗುತ್ತಿತ್ತು. ಕೊನೆಗೆ ಮಹದೇವಪೇಟೆ ಬಳಿ ಬನ್ನಿ ಕಡಿಯುವುದರೊಂದಿಗೆ ದಸರಾ ಆಚರಣೆಗೆ ತೆರೆಬೀಳುತ್ತಿತ್ತು.
ಜನೋತ್ಸವವಾದ ದಸರಾ:ದಸರಾ ಮಂಟಪಗಳ ಮೆರವಣಿಗೆಯಲ್ಲಿ ಧಾರ್ಮಿಕ ಆಚರಣೆ ಇತ್ತಾದರೂ ಈ ಉತ್ಸವಕ್ಕೆ ಸಾರ್ವಜನಿಕ ರಂಗದಲ್ಲಿ ಅಷ್ಟೇನೂ ಮಹತ್ವದ ಸ್ಥಾನ ದೊರೆತಿರಲಿಲ್ಲ. 1969ರಲ್ಲಿ ಮಡಿಕೇರಿ ಪುರಸಭೆಯ ಅಂದಿನ ಅಧ್ಯಕ್ಷರಾಗಿದ್ದ ದಿ. ಕೆ.ಎಸ್. ಅಪ್ಪಚ್ಚುರವರ ನೇತೃತ್ವದಲ್ಲಿ ಪ್ರಥಮ ಬಾರಿಗೆ ದಸರಾ ಸಮಿತಿಯನ್ನು ರಚಿಸಿ, ಭಜನಾಮಂದಿರಗಳನ್ನು ಹಾಗೂ ಕರಗ ದೇವಾಲಯಗಳನ್ನು ಒಂದುಗೂಡಿಸುವ ಮೂಲಕ ಸಾಮೂಹಿಕ ಮೆರವಣಿಗೆಗೆ ಅವಕಾಶ ಮಾಡಿಕೊಡುವುದರೊಂದಿಗೆ ಮಡಿಕೇರಿ ದಸರಾ ಜನೋತ್ಸವವಾಗಲು ಕಾರಣವಾಯಿತು.
ಆ ದಿನಗಳಲ್ಲಿ ಹಿಂದಿನ ಖಾಸಗಿ ಬಸ್ ನಿಲ್ದಾಣದಲ್ಲಿ ವೇದಿಕೆ ನಿರ್ಮಿಸುವುದರೊಂದಿಗೆ ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಎಲ್ಲಾ ಮಂಟಪಗಳು ನಿರ್ದಿಷ್ಟ ಸಮಯದಲ್ಲಿ ಹಾದುಹೋಗುವಂತೆಯೂ, ಉತ್ತಮ ಕಲಾಕೃತಿ ಹೊಂದಿದ ಮಂಟಪಗಳಿಗೆ ಬಹುಮಾನಗಳನ್ನು ನೀಡುವ ಸಂಪ್ರದಾಯವೂ ಜಾರಿಗೆ ಬಂತು. ಇದರೊಂದಿಗೆ ಮಂಟಪಗಳ ಮೆರವಣಿಗೆಯಲ್ಲಿ ಒಂದು ಧಾರ್ಮಿಕ ಶಿಸ್ತನ್ನು ಕಾಲೇಜು ರಸ್ತೆಯ ರಾಮಮಂದಿರವು ರೂಪಿಸಿತು.