ಕೊಡಗು:ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಗುಡ್ಡ ಕುಸಿತ ಉಂಟಾಗಿದ್ದು, ಜಿಲ್ಲೆಯ ತೋಮಾರ ಗ್ರಾಮ ಕಣ್ಮರೆಯಾಗಿದೆ. ಸ್ಥಳಕ್ಕೆ ಎನ್‌ಡಿಆರ್‌ಎಫ್ ತಂಡ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಕೊಡಗಿನಲ್ಲಿ ಗುಡ್ಡ ಕುಸಿತ: ಇಡೀ ಗ್ರಾಮವೇ ಕಣ್ಮರೆ, 12 ಮಂದಿ ನಾಪತ್ತೆ! - ಶಾಸಕ ಕೆ.ಜಿ.ಬೋಪಯ್ಯ
ಗುಡ್ಡ ಕುಸಿತದಿಂದಾಗಿ ವಿರಾಜಪೇಟೆ ತಾಲೂಕಿನ ತೋಮಾರ ಗ್ರಾಮ ಸಂಪೂರ್ಣವಾಗಿ ಮುಚ್ಚಿಹೊಗಿದ್ದು, ಸಾವು ನೋವಿನ ಸಂಖ್ಯೆ ನಿಖರವಾಗಿ ತಿಳಿದು ಬಂದಿಲ್ಲ. ಸ್ಥಳಕ್ಕೆ ಎನ್‌ಡಿಆರ್‌ಎಫ್ ತಂಡ ಭೇಟಿ ನೀಡಿದ್ದು, ರಕ್ಷಣಾ ಕಾರ್ಯಕ್ಕಿಳಿದಿದೆ.
ಜಿಲ್ಲೆಯ ವಿರಾಜಪೇಟೆ ತಾಲೂಕಿನ ತೋಮಾರ ಗ್ರಾಮದಲ್ಲಿ ನಿನ್ನೆ ಸುಮಾರು 11 ಗಂಟೆಗೆ ಗುಡ್ಡ ಕುಸಿತ ಉಂಟಾಗಿದ್ದು, ಬೃಹತ್ ಗಾತ್ರದ ಮರ, ಕಲ್ಲು ಬಂಡೆಗಳು ಇಡೀ ಗ್ರಾಮವನ್ನೆ ಆವರಿಸಿವೆ. ಗ್ರಾಮಕ್ಕೆ ಸಂಪೂರ್ಣವಾಗಿ ಸಂಪರ್ಕ ಕಡಿತಗೊಂಡಿದೆ. ಜಿಲ್ಲಾಡಳಿತ 8 ಮಂದಿ ಕಣ್ಮರೆಯಾಗಿದ್ದಾರೆ ಎನ್ನುವ ಮಾಹಿತಿ ನೀಡಿದ್ದರೆ, ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ 12 ಮಂದಿ ಮಣ್ಣಿನಡಿ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.
ಅಗಾಧವಾಗಿ ಬಿದ್ದಿರುವ ಮಣ್ಣಿನ ರಾಶಿಯಡಿಯಲ್ಲಿ ಮನೆಗಳು ಎಲ್ಲಿವೆ ? ಎಲ್ಲಿ ಬಗೆಯಬೇಕು ? ಎನ್ನುವ ಗೊಂದಲ ಶುರುವಾಗಿದ್ದು, ಈಗಾಗಲೇ ಎನ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಭೇಟಿ ನೀಡಿ ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಮರಗಳನ್ನು ತೆರವುಗೊಳಿಸುತ್ತಿದೆ. ಮಿಲಿಟರಿ, ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯರು ಸಾಮರ್ಥ್ಯಕ್ಕೂ ಮೀರಿ ಕೆಲಸ ಮಾಡುತ್ತಿದ್ದಾರೆ. ಘಟನಾ ಸ್ಥಳಕ್ಕೆ ಶಾಸಕ ಕೆ.ಜಿ.ಬೋಪಯ್ಯ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಭೇಟಿ ನೀಡಿ, ಮುಂದೆ ಆಗಬೇಕಿರುವ ಕಾರ್ಯಾಚರಣೆ ಬಗ್ಗೆ ರೂಪುರೇಷೆಗಳನ್ನು ಸಿದ್ಧಪಡಿಸಿದ್ದಾರೆ.