ಮಡಿಕೇರಿ(ಕೊಡಗು): ಜಿಲ್ಲೆಗೆ ಆಗಸ್ಟ್ ತಿಂಗಳು ಅಂದ್ರೆ ಅದೇಕೊ ಅಪಾಯ ತಂದೊಡ್ಡುವ ತಿಂಗಳಂತಾಗಿದೆ. ಕಳೆದ ಎರಡು ವರ್ಷಗಳಲ್ಲೂ ಇದೇ ಆಗಸ್ಟ್ ತಿಂಗಳು ಹಲವು ಸಾವು ನೋವುಗಳಿಗೆ ಸಾಕ್ಷಿಯಾಗಿತ್ತು. ಈ ವರ್ಷವೂ ಮತ್ತದೇ ಸಂಕಷ್ಟಕ್ಕೆ ಈ ತಿಂಗಳು ಸಾಕ್ಷಿಯಾಗುತ್ತಾ ಎನ್ನುವ ಅನುಮಾನ ಮೂಡಿದೆ.
ಕಳೆದ ಎರಡು ವರ್ಷವೂ ಕೊಡಗು ಜಿಲ್ಲೆ ಪ್ರಾಕೃತಿಕ ವಿಕೋಪ ಸಿಲುಕಿ ನಲುಗಿ ಹೋಗಿತ್ತು. ಹೇಗೋ ಮತ್ತೆ ಚೇತರಿಸಿಕೊಳ್ಳುತ್ತಿದ್ದ ಜಿಲ್ಲೆಯನ್ನು ಕೊರೊನಾ ಎನ್ನೋ ಡೆಡ್ಲಿ ವೈರಸ್ ಮತ್ತೆ ತಲೆ ಎತ್ತದಂತೆ ಮಾಡಿತ್ತು. ಆದರೆ ಇದೀಗ ಆಶ್ಲೇಷ ಮಳೆ ಕೊಡಗಿಗೆ ಗಂಡಾಂತರ ತಂದೊಡ್ಡಿಬಿಡುತ್ತಾ ಎನ್ನೋ ಆತಂಕ ಎದುರಾಗಿದೆ.
2018 ರಲ್ಲಿ ಇದೇ ರೀತಿ, ಜುಲೈ ತಿಂಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಂದಿರಲಿಲ್ಲ. ಆದರೆ ಆಗಸ್ಟ್ ತಿಂಗಳಿನ ಮೂರನೇ ವಾರದಲ್ಲಿ ಸುರಿದಿದ್ದ ರಣಭೀಕರ ಮಳೆಗೆ ಬರೋಬ್ಬರಿ 7 ಪಂಚಾಯಿತಿಗಳ ವ್ಯಾಪ್ತಿಯ 36 ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಭೀಕರ ಭೂಕುಸಿತ ಸಂಭವಿಸಿತ್ತು.
ಕೊಡವರಿಗೆ ಮತ್ತೇ ಕಂಟಕಪ್ರಾಯವಾಗುತ್ತಾ 'ಆಗಸ್ಟ್' ತಿಂಗಳು ಅಂದರೆ ಬರೋಬ್ಬರಿ ಒಂದೇ ವಾರದಲ್ಲಿ 800 ಮಿಲಿ ಮೀಟರ್ ಮಳೆ ಸುರಿದಿತ್ತು. ಇದ ಪರಿಣಾಮವಾಗಿ ಸಂಭವಿಸಿದ ಭೂಕುಸಿತ ಮತ್ತು ಪ್ರವಾಹದಲ್ಲಿ 22 ಜನ ಪ್ರಾಣ ಕಳೆದುಕೊಂಡಿದ್ದರು. ಇನ್ನು, 2019 ರ ಆಗಸ್ಟ್ ತಿಂಗಳಲ್ಲಿಯೂ ಇದೇ ಸ್ಥಿತಿ ಮರುಕಳಿಸಿತ್ತು. ಜುಲೈ ತಿಂಗಳಿಂದನೇ ಎಡಬಿಡದೆ ಸುರಿದಿದ್ದ ಮಳೆ, ಆಗಸ್ಟ್ ಮೊದಲ ವಾರದಲ್ಲೇ ನಿರೀಕ್ಷೆಗೂ ಮೀರಿ ಅಬ್ಬರಿಸಿತ್ತು.
ಬರೋಬ್ಬರಿ 1800 ಮಿಲಿ ಮೀಟರ್ ಮಳೆ ಹಗಲು ರಾತ್ರಿ ಎನ್ನದೆ ಧಾರಾಕಾರವಾಗಿ ಸುರಿದಿತ್ತು. ಪರಿಣಾಮ ಕೇವಲ ಮೂರೇ ದಿನದಲ್ಲಿ ಸೋಮವಾರಪೇಟೆ ಮತ್ತು ವಿರಾಜಪೇಟೆ ಎರಡು ತಾಲೂಕುಗಳು ಪ್ರವಾಹಕ್ಕೆ ಸಿಲುಕಿದ್ದವು. ಮಡಿಕೇರಿ ತಾಲೂಕಿನ ಕೋರಂಗಾಲ ಮತ್ತು ವಿರಾಜಪೇಟೆ ತಾಲೂಕಿನ ತೋರಾದಲ್ಲಿ ಸಂಭವಿಸಿದ ಭೀಕರ ಭೂಕುಸಿತಕ್ಕೆ 19 ಜನರು ಬಲಿಯಾಗಿದ್ದರು. ಈ ಭಯ, ಆತಂಕ ಜಿಲ್ಲೆಯ ಜನರ ಮನಸ್ಸಿನಲ್ಲಿ ಇನ್ನು ಹಾಗೆಯೇ ಉಳಿದಿದೆ.
ಕಳೆದ ವರ್ಷದ ಮಳೆಯ ಪ್ರಮಾಣಕ್ಕೆ ಹೋಲಿಸಿದರೆ ಈ ವರ್ಷವೇ ಹೆಚ್ಚು ಮಳೆ ಸುರಿದಿದೆ. ಈ ಬಾರಿ ಜುಲೈ ತಿಂಗಳಲ್ಲಿ ಮಳೆ ಪ್ರಮಾಣ ಕಡಿಮೆ ಇತ್ತು. ಹೀಗಾಗಿ ಜಿಲ್ಲಾಡಳಿತ ಕೂಡ ಈ ಬಾರಿ ಅಷ್ಟೇನು ಮಳೆ ಬರೋದಿಲ್ಲ ಅನ್ನೋ ಸಮಾಧಾನದಲ್ಲಿತ್ತು. ಆದರೆ ಜನವರಿಯಿಂದ ಇಲ್ಲಿಯವರೆಗೆ ನೋಡಿದರೆ, ಕಳೆದ ವರ್ಷಕ್ಕಿಂತ ಈ ವರ್ಷ 31 ಮಿಲಿ ಮೀಟರ್ ಜಾಸ್ತಿ ಮಳೆಯಾಗಿದೆ. ಅಂದರೆ ಕಳೆದ ಬಾರಿ ಜನವರಿಯಿಂದ ಆಗಸ್ಟ್ ತಿಂಗಳ 3 ನೇ ತಾರೀಖಿನವರೆಗೆ 836 ಮಿ.ಮೀ ಮಳೆ ಸುರಿದಿದ್ದರೆ, ಈ ಬಾರಿ 867 ಮಿ.ಮೀ ಮಳೆಯಾಗಿದೆ. ಅದರಲ್ಲೂ ಕಳೆದ ಎರಡು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ವರುಣ ಎಡಬಿಡದೆ ಅಬ್ಬರಿಸುತ್ತಿದ್ದಾನೆ. ಭಾರತೀಯ ಹವಾಮಾನ ಇಲಾಖೆ ಕೂಡ ಜಿಲ್ಲೆಯಲ್ಲಿ ಇನ್ನೂ 4 ದಿನಗಳ ಕಾಲ 115 ಮಿ.ಮೀ ನಿಂದ 204 ಮಿ. ಮೀ. ಮಳೆಯಾಗುವ ಸಾಧ್ಯತೆ ಇದೆ ಎಂಬ ಮುನ್ಸೂಚನೆ ಸಹ ನೀಡಿದೆ.
ಹೀಗಾಗಿ ಕೊಡಗು ಜಿಲ್ಲಾಡಳಿತ 4 ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಇದೇ ಅಂಶವೇ ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಿದೆ. ಕಳೆದ ಎರಡು ಬಾರಿಯೂ ಆಗಸ್ಟ್ ತಿಂಗಳಲ್ಲೇ ಭೂಕುಸಿತ ಮತ್ತು ಪ್ರವಾಹ ಸೃಷ್ಟಿಯಾಗಿತ್ತು. ಈ ವರ್ಷವೂ ಆಗಸ್ಟ್ ತಿಂಗಳಲ್ಲೇ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿರುವುದರಿಂದ ಮತ್ತೆ ಯಾವ ಅನಾಹುತ ಸಂಭವಿಸುವುದೋ ಎನ್ನು ಆತಂಕ ಜನರಲ್ಲಿ ಮನೆ ಮಾಡಿದೆ.
ಒಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದಲೂ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪಗಳು ಕೊಡಗು ಜಿಲ್ಲೆಗೆ ಆಗಸ್ಟ್ ಎಂದರೆ ಕಂಟಕವೇ ಅನ್ನೋ ಭಾವನೆ ಮೂಡಿಸಿವೆ. ಈ ವರ್ಷವಾದ್ರೂ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿ ಸುರಕ್ಷತೆಗೆ ಮೊದಲ ಪ್ರಾಮುಖ್ಯತೆ ನೀಡಬೇಕಿದೆ.