ಮಡಿಕೇರಿ/ಕೊಡಗು:ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಮಧ್ಯಾಹ್ನದ ನಂತರ ನಿರಂತರ ಮಳೆಯಾಗುತ್ತಿದ್ದು, ಅವಾಂತರಗಳನ್ನೇ ಸೃಷ್ಟಿಸಿದೆ. ನಿನ್ನೆ ಸುರಿದ ಭಾರಿ ಗಾಳಿ, ಮಳೆಗೆ ಮನೆಯ ಮೇಲ್ಛಾವಣಿ ಹಾರಿ ಹೋಗಿದ್ದು, ಮಳೆ ನೀರು ಮನೆಗೆ ನುಗ್ಗಿರುವ ಘಟನೆ ನಾಪೋಕ್ಲು ಸಮೀಪದ ಬೇತು ಗ್ರಾಮದಲ್ಲಿ ನಡೆದಿದೆ.
ನಾಪೋಕ್ಲು ಸಮೀಪದ ಬೇತು ಗ್ರಾಮದ ನಿವಾಸಿ, ದಿವಂಗತ ಕೃಷ್ಣಪ್ಪನವರ ಮನೆಯ ಮೇಲ್ಛಾವಣಿಯ ಸೀಟುಗಳು ಹಾರಿ ಹೋಗಿವೆ. ಪರಿಣಾಮ ಮನೆಯೊಳಗೆ ಮಳೆ ನೀರು ತುಂಬಿ, ಅನೇಕ ವಸ್ತುಗಳು ಹಾನಿಯಾಗಿವೆ. ಮನೆಯಲ್ಲಿ ಕೃಷ್ಣಪ್ಪನವರ ಪತ್ನಿ ಪುಷ್ಪ , ಪುತ್ರ ಹರೀಶ್, ಸೊಸೆ ಸ್ವಾತಿ ಹಾಗೂ ಮಗಳು ಮೋನಿಷಾ ವಾಸವಾಗಿದ್ದು ಅವರೆಲ್ಲ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೊಡಗಿನಲ್ಲಿ ಅವಾಂತರ ಸೃಷ್ಟಿಸಿದ ಮಳೆರಾಯ ಸದ್ಯಕ್ಕೆ ಮನೆಯೊಳಗೆ ಮಳೆ ನೀರು ಬೀಳದಂತೆ ಸ್ಥಳೀಯರ ಸಹಾಯದಿಂದ ತಾತ್ಕಾಲಿಕವಾಗಿ ಟಾರ್ಪಾಲ್ ಹೊದಿಕೆ ಹಾಕಲಾಗಿದೆ. ಮಡಿಕೇರಿ ಸಮೀಪದ ಹಾಕತ್ತೂರು ಭಾಗದಲ್ಲೂ ಸಹ ಭಾರಿ ಗಾಳಿ ಮಳೆಯಾಗಿದ್ದು, ರಜೀಶ್ ಎಂಬುವರ ಮನೆ ಮೇಲೆ ಮರ ಬಿದ್ದಿದೆ. ಆದ್ರೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಹುಬ್ಬಳ್ಳಿಯಲ್ಲಿ ಧರೆಗುರುಳಿದ 60 ವಿದ್ಯುತ್ ಕಂಬಗಳು: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಬಿರುಗಾಳಿ ಸಹಿತ ಮಳೆಗೆ 60 ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿದ್ದು, ಹೆಸ್ಕಾಂ ಇಲಾಖೆಗೆ ಸುಮಾರು 25 ಲಕ್ಷ ರೂಪಾಯಿ ಹಾನಿಯಾಗಿದೆ. ದೇಶಪಾಂಡೆನಗರ, ದೇಸಾಯಿ ಸರ್ಕಲ್, ವಿದ್ಯಾನಗರ, ಹಳೇ ಹುಬ್ಬಳ್ಳಿ ಸೇರಿದಂತೆ ಹಲವು ಬಡಾವಣೆಗಳಲ್ಲಿ ಮರಗಳ ಜೊತೆಗೆ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಇದನ್ನೂ ಓದಿ:ಗಾಯಗೊಂಡ ಕಾಲಿನಲ್ಲಿ 14 ಕಲ್ಲುಗಳು.. ಹೊರತೆಗೆಯದೇ ಹೊಲಿಗೆ ಹಾಕಿದ್ರಾ ಕಡಬ ಆಸ್ಪತ್ರೆ ಸಿಬ್ಬಂದಿ!?