ಕೊಡಗು: ಜಿಲ್ಲೆಯಲ್ಲಿ ಕಳೆದ ವಾರದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಅಲಲ್ಲಿ ಮರಗಳು ನೆಲಕ್ಕೆ ಉರುಳುತ್ತಿದೆ. ಕಾವೇರಿ ನೀರಿನ ಮಟ್ಟ ಏರಿಕೆಯಾಗಿದೆ.
ಮಳೆಯ ರಭಸಕ್ಕೆ ಜನರಲ್ಲಿ ಆತಂಕ ಶುರುವಾಗಿದ್ದು, ಜಿಲ್ಲೆಯಲ್ಲಿ ಮತ್ತೊಂದು ದಿನ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಶನಿವಾರ ಸಂಜೆವರೆಗೂ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆಯಾಗಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ 115.6 ಮಿಲಿ ಮೀಟರ್ನಿಂದ 204 ಮಿಲಿ ಮೀಟರ್ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಿದೆ. ತಲಕಾವೇರಿ, ಭಾಗಮಂಡಲದಲ್ಲಿ ಮಳೆ ಹೆಚ್ಚಾಗಿದ್ದು, ತ್ರಿವೇಣಿ ಸಂಗಮದಲ್ಲಿ ನೀರು ಹೆಚ್ಚಾಗಿ ರಸ್ತೆಯ ಮಟ್ಟಕ್ಕೆ ಹರಿಯುತ್ತಿದೆ.
ನಾಪೋಕ್ಲು ಬಲಮುರಿನಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಅಲ್ಲದೆ ಮಳೆಯ ಆರ್ಭಟಕ್ಕೆ ಅಲಲ್ಲಿ ಅವಾಂತರ ಸೃಷ್ಟಿಯಾಗಿದೆ. ದೊಡ್ಡ ದೊಡ್ಡ ಮರಗಳು ನೆಲಕ್ಕುರುಳುತ್ತಿದ್ದು, ರಸ್ತೆ ಸಂಚಾರ ಅಸ್ತವ್ಯಸ್ತವಾಗುತ್ತಿದೆ. ಮಡಿಕೇರಿ ತಾಲೂಕಿನ ಮದೆನಾಡು ಗ್ರಾಮದಲ್ಲಿ ಮಳೆ, ಗಾಳಿಯಿಂದ ವಾಸದ ಮನೆಗೆ ಹಾನಿಯಾಗಿದೆ. ಕೆಲವು ಕಡೆ ರಸ್ತೆ ಬಿರುಕು ಬಿಟ್ಟಿದ್ದು, ಟಾರ್ಪಲ್ ಹೊದಿಸಲಾಗಿದೆ.