ಕೊಡಗು:ಕಳೆದೆರಡು ದಿನಗಳಿಂದ ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪಲಿನಲ್ಲಿ ಮಳೆಯು ತನ್ನ ಆರ್ಭಟವನ್ನು ಮುಂದುವರೆಸಿದೆ. ಹಾಗೆಯೇ, ದಕ್ಷಿಣ ಕೊಡಗಿನ ಭಾಗದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಬಿಡುವು ನೀಡದಂತೆ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಸಹಜವಾಗಿಯೇ ಜನಜೀವನ ಅಸ್ತವ್ಯಸ್ತಗೊಂಡಿದೆ.
ಮಳೆ ಹಿನ್ನೆಲೆಯಲ್ಲಿ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಡಂಗಾಲ ಗ್ರಾಮದ ಕೂಲಿ ಕಾರ್ಮಿಕ ಎ ಮುಸ್ತಫಾ ಎಂಬುವರಿಗೆ ಸೇರಿದ ಮನೆಯ ಗೋಡೆ ಕುಸಿದು ಬಿದ್ದಿದೆ. ಗೋಡೆಕುಸಿತ ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಅನುಹುತ ತಪ್ಪಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಭೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ.
ಮನೆಯ ಎರಡು ಗೋಡೆ ಸಂಪೂರ್ಣ ಕುಸಿತಗೊಂಡಿದ್ದು, ಇನ್ನುಳಿದ ಗೋಡೆಗಳು ಭಾರಿ ಪ್ರಮಾಣದಲ್ಲಿ ಬಿರುಕು ಕಾಣಿಸಿಕೊಂಡಿವೆ. ಮನೆಯವರು ಕೂಲಿ ಕೆಲಸಕ್ಕೆ ತೆರಳಿದ ವೇಳೆ ಈ ಘಟನೆ ನಡೆದಿದೆ. ಇದರಿಂದ ಮನೆಯವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಸಮಸ್ಯೆ ಎದುರಾಗಿದೆ.
ಮಳೆಯ ಪ್ರಮಾಣ ಹೆಚ್ಚಾದ ಹಿನ್ನೆಲೆ ಗೋಣಿಕೊಪ್ಪ ನಗರದ ಕೀರೆ ಹೊಳೆಯಲ್ಲಿ ನೀರಿನ ಮಟ್ಟ ಏರಿಕೆ ಕಂಡಿದೆ. ಆಗಿಂದಾಗ ವಿದ್ಯುತ್ ಪೂರೈಕೆಯಲ್ಲಿ ತೊಂದರೆ ಎದುರಾಗಿದೆ. ಮಳೆಯೊಂದಿಗೆ ಗಾಳಿ ಬೀಸುತ್ತಿರುವ ಕಾರಣ ವಿದ್ಯುತ್ ಪೂರೈಕೆಗೆ ಅಡಚಣೆ ಎದುರಾಗಿದೆ. ನಗರದಲ್ಲಿ ಜನರ ಓಡಾಟ ಹೆಚ್ಚಾಗಿ ಕಂಡು ಬರಲಿಲ್ಲ. ವಾರದ ಸಂತೆ ವ್ಯಾಪಾರ ಅಷ್ಟಾಗಿ ನಡೆಯಲಿಲ್ಲ. ಮಳೆಯ ನಡುವೆ ಪ್ಲಾಸ್ಟಿಕ್ ಹೊದಿಕೆಯಲ್ಲಿಯೇ ರಸ್ತೆ ಬದಿಯ ತರಕಾರಿ ವ್ಯಾಪಾರಸ್ಥರು ವ್ಯಾಪಾರ ವಹಿವಾಟು ನಡೆಸಿದ್ದಾರೆ.
ಓದಿ:ಉತ್ತರ ಕನ್ನಡದಲ್ಲಿ ಭತ್ತದ ಕೃಷಿ ಇಳಿಮುಖ: ಅನ್ನದ ಕೊರತೆ ಎದುರಾಗುವ ಭೀತಿ