ಕೊಡಗು: ಕರ್ನಾಟಕದ ಕಾಶ್ಮೀರ ಕೊಡಗಿನಲ್ಲಿ ನಾಲ್ಕು ದಿನಗಳಿಂದ ನಿರಂತರ ಮಳೆ ಅಬ್ಬರಿಸುತ್ತಿದೆ. ಇಂದು ಬೆಳಗ್ಗೆಯಿಂದ ಬಿಡುವು ಕೊಟ್ಟಿದ್ದ ವರುಣ, ಮಧ್ಯಾಹ್ನದ ನಂತರ ಅಬ್ಬರಿಸುತ್ತಿದ್ದಾನೆ.
ನಿರಂತರ ಮಳೆ ಸುರಿಯುತ್ತಿರುವ ಕಾರಣ ನದಿ, ಹಳ್ಳ, ತೊರೆ ಮತ್ತು ಝರಿಗಳಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ. ಮೈಕೊರೆವ ಚಳಿಯ ನಡುವೆಯೂ ಜಿಲ್ಲೆಯ ಜನತೆ ಕೊಡೆಗಳನ್ನು ಹಿಡಿದು ದೈನಂದಿನ ಕೆಲಸಗಳನ್ನು ಮಾಡಿಕೊಂಡರು.
ಬ್ರಹ್ಮಗಿರಿ, ಭಾಗಮಂಡಲ ಹಾಗೂ ತಲಕಾವೇರಿ, ವಿರಾಜಪೇಟೆ, ನಾಪೋಕ್ಲು ಸೇರಿದಂತೆ ವಿವಿಧ ಭಾಗಗಳಲ್ಲಿ ಮಳೆಯ ಅಬ್ಬರ ತುಸು ಜೋರಾಗಿದೆ. ದಿನಗಳು ಕಳೆದಂತೆ ಕಾವೇರಿ ನದಿಯಲ್ಲೂ ನಿಧಾನವಾಗಿ ನೀರಿನ ಹರಿವು ಹೆಚ್ಚುತ್ತಿದೆ. ಸೋಮವಾರಪೇಟೆ ಭಾಗದಲ್ಲೂ ಉತ್ತಮ ಮಳೆ ಆಗುತ್ತಿರುವುದರಿಂದ ಹಾರಂಗಿ ಜಲಾಶಯದಲ್ಲೂ ನೀರಿನ ಒಳ ಹರಿವು ಹೆಚ್ಚುತ್ತಿದೆ.
ಹಾಗೆಯೇ ಜೋಳ ಹಾಗೂ ಭತ್ತ ನಾಟಿಗೆ ರೈತರು ಭೂಮಿಯನ್ನು ಹದಗೊಳಿಸಿಕೊಂಡು ಕೃಷಿ ಚಟುವಟಿಕೆ ಉತ್ಸಾಹದಲ್ಲಿದ್ದಾರೆ. ಮಳೆ ಬರಲಿ. ಆದರೆ, ಪ್ರವಾಹ ಸೃಷ್ಟಿಸದಿರಲಿ ಎಂದು ರೈತರು ಪ್ರಾರ್ಥಿಸುತ್ತಿದ್ದಾರೆ.