ಕರ್ನಾಟಕ

karnataka

ETV Bharat / state

Kodagu Rain: ಕೊಡಗಿನಲ್ಲಿ ಭಾರಿ ಮಳೆ, ಹೆದ್ದಾರಿ ಕುಸಿಯುವ ಭೀತಿ: ಯೆಲ್ಲೋ ಅಲರ್ಟ್ ಘೋಷಣೆ​

ಕೊಡಗು ಜಿಲ್ಲೆಯಲ್ಲಿ ಮಳೆ ಬಿರುಸು ಪಡೆದಿದ್ದು, ಹವಾಮಾನ ಇಲಾಖೆಯು ಯೆಲ್ಲೋ ಆಲರ್ಟ್ ಘೋಷಣೆ ಮಾಡಿದೆ.

heavy-rain-in-kodagu-district-yellow-alert
Kodagu Rain: ಕೊಡಗಿನಲ್ಲಿ ಭಾರಿ ಮಳೆ, ಹೆದ್ದಾರಿ ಕುಸಿಯುವ ಭೀತಿ: ಯೆಲ್ಲೋ ಅಲರ್ಟ್​

By

Published : Jul 5, 2023, 8:20 AM IST

Updated : Jul 5, 2023, 2:35 PM IST

ಕೊಡಗಿನಲ್ಲಿ ಭಾರಿ ಮಳೆ

ಕೊಡಗು:ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ ಮತ್ತೆ ಚುರುಕು ಪಡೆದುಕೊಂಡಿದೆ. ನಿನ್ನೆಯಿಂದ ಮಡಿಕೇರಿ, ನಾಪೋಕ್ಲು, ಗಾಳಿಬೀಡು, ವಿರಾಜಪೇಟೆ ಸೇರಿದಂತೆ ವಿವಿಧ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ.

ಕೊಡಗಿನ ಹಲವು ಭಾಗಗಳಲ್ಲಿ ಮಳೆ ಜೊತೆಗೆ ಗಾಳಿಯೂ ಹೆಚ್ಚಾಗಿದ್ದು, ಮರಗಳು ಧರೆಗುರುಳಿವೆ. ಬೋಹಿಕೇರಿ ಮತ್ತು ಕುಶಾಲನಗರಕ್ಕೆ ತೆರಳುವ ರಸ್ತೆಯಲ್ಲಿ ಮರ ಬಿದ್ದಿದ್ದು, ಕೆಲಕಾಲ ರಸ್ತೆ ಸಂಚಾರ ಬಂದ್ ಆಗಿತ್ತು. ಬಳಿಕ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಅಲ್ಲದೆ, ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು ವಿದ್ಯುತ್ ಸಮಸ್ಯೆ ಎದುರಾಗುತ್ತಿದೆ.

ಹೆದ್ದಾರಿ ಕುಸಿಯುವ ಭೀತಿ:ಭಾರಿ ಮಳೆ ಹಿನ್ನೆಲೆಯಲ್ಲಿ ಕೊಡಗು- ಸಂಪಾಜೆ ಗ್ರಾಮದ ಕೊಯನಾಡು ಅರಣ್ಯ ಇಲಾಖೆ ಕಚೇರಿಯ ಬಳಿ ಮತ್ತೆ ಹೆದ್ದಾರಿ ಕುಸಿಯುವ ಭೀತಿ ಎದುರಾಗಿದ್ದು, ಬ್ಯಾರಿಕೇಡ್ ಅಳವಡಿಸಿ ರಸ್ತೆ ಬಂದ್ ಮಾಡಲಾಗಿದೆ. ಮುಖ್ಯ ರಸ್ತೆಯ ಬದಿಯಲ್ಲಿ ಕಳೆದ ಸಲ ನಿರ್ಮಾಣ ಮಾಡಿದ್ದ ತಾತ್ಕಾಲಿಕ ರಸ್ತೆಯ ಮೂಲಕ ವಾಹನ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ರಸ್ತೆ ಸಂಚಾರ ಬಂದ್

ಕಳೆದ ಮಳೆಗಾಲದಲ್ಲೂ ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿ 275 ಕೊಯನಾಡು ಬಳಿ ರಸ್ತೆ ಬಿರುಕು ಬಿಟ್ಟಿತ್ತು. ಆಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಬದಿಯಲ್ಲೇ ಮತ್ತೊಂದು ರಸ್ತೆಯನ್ನು ಮಾಡಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದರು. ಇದೀಗ ಮತ್ತೊಮ್ಮೆ ಎರಡು ಜಿಲ್ಲೆಯ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ.

ಕೃಷಿ ಚಟುವಟಿಕೆ ಚುರುಕು:ಸಾಮಾನ್ಯವಾಗಿ ಜೂನ್ ತಿಂಗಳಿನಲ್ಲೇ ಕೊಡಗಿನಲ್ಲಿ ಕೃಷಿ ಚಟುವಟಿಕೆಗಳು ಚುರುಕು ಪಡೆದುಕೊಳ್ಳುತ್ತಿದ್ದವು. ಆದರೆ ಈ ಬಾರಿ ಮುಂಗಾರು ಕೈಕೊಟ್ಟ ಕಾರಣ ಒಂದು ತಿಂಗಳು ತಡವಾಗಿ ಕೃಷಿ ಕಾರ್ಯಗಳು ಆರಂಭಗೊಳ್ಳುತ್ತಿವೆ. ಕಳೆದ ಸಲದ ಮಳೆಗೆ ಹೋಲಿಸಿದರೆ ಈ ವರ್ಷ ವಾಡಿಕೆಯಂತೆ ಮಳೆಯಾಗಿಲ್ಲ.

ಎನ್​ಡಿಆರ್​ಎಫ್​ ಸಜ್ಜು:ಸದ್ಯ ಕೊಡಗಿನಲ್ಲಿ ಭಾರಿ ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಜಿಲ್ಲೆಯಲ್ಲಿನ ಮಳೆ ಅವಾಂತರಗಳನ್ನು ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದ್ದು, ಎನ್​ಡಿಆರ್​​ಎಫ್ ತಂಡ ಮತ್ತು ಅಗ್ನಿಶಾಮಕ ದಳಗಳ ಮೂಲಕ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕೊಡಗಿನಲ್ಲಿ ಭಾರಿ ಮಳೆ

ದಕ್ಷಿಣ ಕನ್ನಡ- ಉತ್ತರ ಕನ್ನಡದಲ್ಲೂ ಅಲರ್ಟ್​:ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ವರುಣನ ಆರ್ಭಟ ಮುಂದುವರೆದಿದ್ದು, ಹವಾಮಾನ ಇಲಾಖೆಯು ಜುಲೈ 5ರವರೆಗೆ ರೆಡ್ ಅಲರ್ಟ್ ಘೋಷಿಸಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲ ಶಾಲಾ ಪ್ರೌಢಶಾಲೆ, ಪಿಯು ತರಗತಿಗಳಿಗೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಆದೇಶಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಮಳೆ ಬಿರುಸುಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಭಟ್ಕಳ, ಕಾರವಾರ ತಾಲೂಕುಗಳ ಶಾಲಾ, ಕಾಲೇಜುಗಳಿಗೆ ಬುಧವಾರ ರಜೆ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಜುಲೈ 5ರ ಬೆಳಗ್ಗೆ 8:30 ರಿಂದ ಜುಲೈ 7 ರವರೆಗೆ ಆರೆಂಜ್ ಅಲರ್ಟ್ ನೀಡಲಾಗಿದೆ.

ಇದನ್ನೂ ಓದಿ:ಬೆಟ್ಟದಿಂದ ರಸ್ತೆಗುರುಳಿದ ಬೃಹತ್ ಬಂಡೆ, ಕಾರುಗಳು ಧ್ವಂಸ, ಇಬ್ಬರು ಸಾವು: ಭಯಾನಕ ವಿಡಿಯೋ

Last Updated : Jul 5, 2023, 2:35 PM IST

ABOUT THE AUTHOR

...view details