ಕೊಡಗು:ಕೆಲವು ದಿಗಳಿಂದ ಬಿಡುವು ನೀಡಿದ್ದ ವರುಣ ಆರ್ಭಟಿಸುತ್ತಿದ್ದಾನೆ. ಕೊಡಗಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯ ಗಡಿ ಭಾಗದಲ್ಲಿ ಬೆಟ್ಟಗಳು ಕುಸಿಯುತ್ತಿದ್ದು, ರಸ್ತೆಯಲ್ಲಿ ಬಿರುಕು ಕಾಣಿಕೊಳ್ಳುತ್ತಿದೆ. ಇದರಿಂದಾಗಿ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.
ಮಡಿಕೇರಿ ತಾಲೂಕಿನ ಸಂಪಾಜೆ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಅರೆಕಲ್ಲು ಬೆಟ್ಟ ಕುಸಿದಿದ್ದು, ಕೆಳಭಾಗದಲ್ಲಿ ವಾಸ ಮಾಡುವ ಜನರು ಭಯದಲ್ಲಿದ್ದಾರೆ. ಇನ್ನು ಬೈಲು ಗ್ರಾದ ಬಳಿ ರಸ್ತೆ ಬಿರುಕು ಬಿಟ್ಟಿದ್ದು, ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ಜನರ ಸಂಚಾಕ್ಕೆ ಅಡಚಣೆ ಆಗಿದ್ದು, ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕಳೆದ ರಾತ್ರಿಯಿಡೀ ಸುರಿಯುತ್ತಿರುವ ಮಳೆಯಿಂದ ಮಡಿಕೇರಿ ತಾಲೂಕಿನ ಚೆಂಬುಗ್ರಾಮದ ದಬ್ಬಡ್ಕ ಕೊಪ್ಪದ ಬಾಲಕೃಷ್ಣ ಎಂಬುವರಿಗೆ ಸೇರಿದ ಮನೆಗೆ ರಾತ್ರಿ ಸಮಯದಲ್ಲಿ ನೀರು ನುಗ್ಗಿದ್ದು, ಪಾಣ ಉಳಿಸಿಕೊಳ್ಳಲು ಮನೆಯಿಂದ ಓಡಿ ಬಂದಿದ್ದಾರೆ. ಮನೆಯಲ್ಲಿದ್ದ ವಸ್ತುಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಸ್ಥಳಕ್ಕೆ ಎನ್ಡಿಆರ್ಎಫ್ ತಂಡ ಭೇಟಿ ನೀಡಿ ಕೆಲವು ವಸ್ತುಗಳು ಮನೆಯಿಂದ ಹೊರತಂದಿದ್ದಾರೆ. ಮಳೆಯಿಂದ ಬೆಟ್ಟದಲ್ಲಿದ್ದ ರಬ್ಬರ್ ತೋಟ ಕುಸಿದಿದ್ದು, ಅರ್ಧ ಏಕರೆಗೂ ಹೆಚ್ಚು ರಬರ್ ತೋಟ ನಾಶವಾಗಿದೆ.